ಟ್ವೀಟ್ಟರ್ ನಲ್ಲಿ 4000 ಟ್ವೀಟ್ ಗಳಿಗೆ ಪರಿಹಾರ ಒದಗಿಸಿದ 'ಟ್ವೀಟರ್ ಗರ್ಲ್'
Monday, December 26, 2022
ಭುವನೇಶ್ವರ್: ಸೋಶಿಯಲ್ ಮೀಡಿಯಾಗಳು ಕೇವಲ ಟೈಂ ಪಾಸ್ ಅಥವಾ ಮನರಂಜನೆಗೋಸ್ಕರ ಮಾತ್ರವಲ್ಲ. ಇದು ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸಾಧನವೂ ಹೌದು. ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಯುವತಿಯೊಬ್ಬಳು ಇದನ್ನು ಸಾಬೀತು ಪಡಿಸಿದ್ದಾಳೆ. ಈಗ ಆಕೆ “ಟ್ವಿಟರ್ ಗರ್ಲ್” ಎಂದೇ ಪ್ರಸಿದ್ಧಳಾಗಿದ್ದಾಳೆ.
ಒಡಿಶಾ ರಾಜ್ಯದ ಕಿಯೋಂಜಾರ್ ಜಿಲ್ಲೆಯ ಆನಂದಪುರ್ ಬ್ಲಾಕ್ ಅಡಿಯಲ್ಲಿ ಬರುವ ಬೆಲ್‌ಬಹಲಿ ಗ್ರಾಮದ ನಿವಾಸಿಗಳಾದ ಅಭಿಮನ್ಯು ಜೆನಾ ಮತ್ತು ಸಬಿತಾ ದಂಪತಿಯ ಪುತ್ರಿ ಶ್ರೀಲೇಖಾ ಎಂಬ ಯುವತಿಯೇ ಟ್ವಿಟರ್ ಗರ್ಲ್ ಎಂದು ಪ್ರಸಿದ್ಧಿ ಪಡೆದಾಕೆ. ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಲೇಖಾ ಕೇವಲ ಕಿಯೋಂಜರ್ ಮಾತ್ರವಲ್ಲದೆ, ಒಡಿಶಾದ ವಿವಿಧ ವಿವಿಧ ಭಾಗಗಳ ಸಮಸ್ಯೆಯನ್ನು ಪರಿಹರಿಸಿದ್ದಾರೆ.
ಇಲ್ಲಿಯವರೆಗೆ ಶ್ರೀಲೇಖಾ 6000 ಟ್ವಿಟ್ ಮಾಡಿದ್ದು, ಅದರಲ್ಲಿ 4000 ಟ್ವಿಟ್ ಸಮಸ್ಯೆಗಳನ್ನು ಬಗೆಹರಿಸಿದೆ. 2020ರಲ್ಲಿ ತಮ್ಮ ಗ್ರಾಮದ ಟ್ರಾನ್ಸ್‌ಫಾರ್ಮರ್ ಸಮಸ್ಯೆಯ ಬಗ್ಗೆ ಶ್ರೀಲೇಖಾ ಟ್ವಿಟ್ ಮಾಡಿ, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ತಕ್ಷಣವೇ ಆಕೆಯ ಸಮಸ್ಯೆ ಬಗೆಹರಿದಿತ್ತು. ಅಲ್ಲಿಂದಾಚೆಗೆ ಅನೇಕ ಸಮಸ್ಯೆಗಳ ಬಗ್ಗೆ ಶ್ರೀಲೇಖಾ ಬೆಳಕು ಚೆಲ್ಲುತ್ತಿದ್ದಾರೆ.
ಒಡಿಶಾದ ವಿವಿಧ ಭಾಗದ ಜನರ ಸಮಸ್ಯೆಗಳನ್ನು ಅರಿತು ಶ್ರೀಲೇಖಾ ಟ್ವಿಟ್ ಮಾಡಿದ್ದಾರೆ. ಅಲ್ಲದೆ, ಬಡ ಜನರಿಗೆ ಪರಿಹಾರಗಳನ್ನು ನೀಡುವಂತೆ ಹಾಗೂ ರೋಗಿಗಳ ಚಿಕಿತ್ಸೆಗೆ ನೆರವಾಗುವಂತೆ, ರಕ್ತದ ವ್ಯವಸ್ಥೆ ಮಾಡುವಂತೆ, ಪ್ರಾಣಿ-ಪಕ್ಷಿಗಳ ಚಿಕಿತ್ಸೆಗೆ ಸಹಾಯ ಮಾಡುವಂತೆ, ರಸ್ತೆ ಮತ್ತು ನೀರು ಮುಂತಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಹೀಗಾಗಿ ಶ್ರೀಲೇಖಾ ಟ್ವಿಟರ್ ಗರ್ಲ್ ಅಂತಾನೇ ಫೇಮಸ್ ಆಗಿದ್ದಾರೆ.