-->
ಕೇವಲ ಮಿಸ್ಡ್ ಕಾಲ್ ನೀಡಿ ಒಟಿಪಿ ಪಡೆಯದೆ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂ. ಎಗರಿಸಿದ ಸೈಬರ್ ಕಳ್ಳರು...!

ಕೇವಲ ಮಿಸ್ಡ್ ಕಾಲ್ ನೀಡಿ ಒಟಿಪಿ ಪಡೆಯದೆ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂ. ಎಗರಿಸಿದ ಸೈಬರ್ ಕಳ್ಳರು...!


ಹೊಸದಿಲ್ಲಿ: ಸೈಬರ್ ವಂಚಕರ ಜಾಲವೊಂದು ದಕ್ಷಿಣ ದಿಲ್ಲಿಯ ಭದ್ರತಾ ಸೇವೆಗಳ ಕಂಪೆನಿಯ ನಿರ್ದೇಶಕರೊಬ್ಬರ ಬ್ಯಾಂಕ್ ಖಾತೆಯಿಂದ 50 ಲಕ್ಷ ರೂ. ಮೊತ್ತವನ್ನು ಎಗರಿಸಿದ್ದಾರೆ. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ವಂಚಕರು ಬ್ಯಾಂಕ್ ಖಾತೆದಾರರ ಮೊಬೈಲ್ ಫೋನ್‌ಗೆ ಕೇವಲ ಮಿಸ್ ಕಾಲ್ ಮಾತ್ರ ನೀಡಿ ಯಾವುದೇ ಒಟಿಪಿ ನಂಬರ್ ಅನ್ನು ಪಡೆಯದೆ ಹಣವನ್ನು ಎಗರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಭಾರತದಲ್ಲಿಯೇ ವ್ಯಕ್ತಿಯೊಬ್ಬರ ಖಾತೆಯಿಂದ ಸೈಬರ್ ಖದೀಮರು ಎಗರಿಸಿರುವ ಗರಿಷ್ಠ ಮೊತ್ತದ ಪ್ರಕರಣವಾಗಿದೆ.

ಸಂತ್ರಸ್ತ ವ್ಯಕ್ತಿ ಮೊಬೈಲ್ ಫೋನ್ ಗೆ ಕೆಲ ದಿನಗಳ ಹಿಂದೆ ಸಂಜೆ 7 ಗಂಟೆಯಿಂದ ರಾತ್ರಿ 8:45 ಗಂಟೆಯ ಅವಧಿಯೊಳಗೆ ಮಿಸ್ಡ್ ಕಾಲ್‌ಗಳು ಬಂದಿತ್ತು. ಅವರು ಕೆಲವು ಕರೆಗಳನ್ನು ಸ್ವೀಕರಿಸಿದ್ದಾರೆ. ಕೆಲವು ಕರೆಗಳನ್ನು ನಿರ್ಲಕ್ಷಿಸಿದ್ದಾರೆ. ಯಾಕೆಂದರೆ, ಕರೆ ಮಾಡಿರುವಾತ ಮಾತನಾಡುತ್ತಿರಲಿಲ್ಲ. ಆ ಬಳಿಕ ಅವರು ತಮ್ಮ ಫೋನ್ ಅನ್ನು ಪರಿಶೀಲಿಸಿದರೆ ಸುಮಾರು 50 ಲಕ್ಷ ರೂ. ಮೊತ್ತವು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಆಗಿರುವುದು ಕಂಡು ಬಂದಿದೆ.

ಈ ಹಣದಲ್ಲಿ 12 ಲಕ್ಷ ರೂ. ಭಾಸ್ಕರ್ ಮಂಡಲ್ ಎಂಬಾತನ ಖಾತೆಗೆ, 4.6 ಲಕ್ಷ ರೂ. ಅವಿಜಿತ್ ಗಿರಿ ಎಂಬಾತನ ಖಾತೆಗೆ ಹೋಗಿರುವುದು ತಿಳಿದು ಬಂದಿದೆ. ಜೊತೆಗೆ ತಲಾ ಸುಮಾರು 10 ಲಕ್ಷ ರೂ. ಎರಡು ಖಾತೆಗಳಿಗೆ ಹೋಗಿದೆ. ಅಲ್ಲದೆ ಸಣ್ಣ ಮೊತ್ತಗಳ ಇತರ ಹಲವಾರು ವ್ಯವಹಾರಗಳೂ ನಡೆದಿವೆ. ಈ ವಂಚನೆಯ ಸೂತ್ರಧಾರಿಗಳು ಝಾರ್ಖಂಡ್ ರಾಜ್ಯದ ಜಮಾರ ಎಂಬ ಪಟ್ಟಣದವರಾಗಿರಬಹುದು ಎನ್ನುವುದನ್ನು ಪ್ರಾರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹಣ ಸ್ವೀಕರಿಸಿದವರು ತಮ್ಮ ಖಾತೆಗಳನ್ನು ಕಮಿಷನ್ ಆಧಾರದಲ್ಲಿ ವಂಚಕರಿಗೆ ಬಾಡಿಗೆಗೆ ಕೊಟ್ಟಿರಬಹುದು ಎಂಬುದಾಗಿ ಭಾವಿಸಲಾಗಿದೆ.

ಬಹಳ ಆಘಾತಕಾರಿ ಸಂಗತಿಯೆಂದರೆ, ಸಂತ್ರಸ್ತ ವ್ಯಕ್ತಿಯು ವಂಚಕರಿಗೆ ತನ್ನ ಯಾವುದೇ ಬ್ಯಾಂಕ್ ಮಾಹಿತಿಗಳನ್ನು ನೀಡಿಲ್ಲ. ಕೇವಲ ಮೊಬೈಲ್ ಕರೆ ಮಾಡಿಯೇ ಹಣ ಎಗರಿಸುವಲ್ಲಿ ಸೈಬರ್ ಖದೀಮರು ಯಶಸ್ವಿಯಾಗಿದ್ದಾರೆ. ಸೈಬರ್ ಕಳ್ಳರು 'ಸಿಮ್ ಸ್ಟ್ಯಾಪ್' (ಸಿಮ್ ಬದಲಾವಣೆ) ತಂತ್ರವನ್ನು ಬಳಸಿ ವಂಚನೆ ನಡೆಸಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿಯ ಫೋನ್ ಸಿಮ್‌ಕಾರ್ಡ್‌ನ ಮತ್ತೊಂದು ಪ್ರತಿ ಪಡೆದು ವಂಚನೆ ನಡೆಸುವ ವಿಧಾನ ಇದಾಗಿರಬಹುದು ಎಂದು ಪೊಲೀಸರು ಹೇಳುತ್ತಾರೆ. ಈ ವಿಧಾನದಲ್ಲಿ, ಎರಡು ಹಂತಗಳ ಪರಿಶೀಲನೆಯಲ್ಲಿರುವ ಲೋಪಗಳನ್ನು ಕ್ರಿಮಿನಲ್‌ಗಳು ಬಳಸಿಕೊಳ್ಳುತ್ತಾರೆ. ಇಲ್ಲಿ ಎರಡನೇ ಹಂತದ ಪರಿಶೀಲನೆಯು ಮೊಬೈಲ್ ಫೋನ್‌ಗೆ ಬರುವ ಸಂದೇಶ ಅಥವಾ ಕರೆಯಾಗಿದೆ.

“ಈ ವಂಚನಾ ವಿಧಾನದಲ್ಲಿ, ವಂಚಕರು ಸಂತ್ರಸ್ತರ ಮೊಬೈಲ್ ಸೇವೆ ಪೂರೈಕೆದಾರ ಕಂಪೆನಿಯನ್ನು ಸಂಪರ್ಕಿಸಿ ಸಂತ್ರಸ್ತನ ಮೊಬೈಲ್ ಸಂಖ್ಯೆಯನ್ನೇ ಹೊಂದಿರುವ ಬೇರೆ ಸಿಮ್ ಕಾರ್ಡ್‌ಗೆ ಚಾಲನೆ ನೀಡುವಂತೆ ಕೋರುತ್ತಾರೆ. ಹಾಗೂ ವಂಚನಾ ವಿಧಾನಗಳ ಮೂಲಕ ಈ ಪ್ರಕ್ರಿಯೆಯ ಷರತ್ತುಗಳನ್ನು ಪೂರೈಸುತ್ತಾರೆ. ಇದಾದ ಬಳಿಕ ಅವರು ಸಂತ್ರಸ್ತನ ಫೋನ್‌ನ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ. “ಫೋನ್ ಅಪಹರಣ ಸೇರಿದಂತೆ ಇತರ ಕೋನಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Ads on article

Advertise in articles 1

advertising articles 2

Advertise under the article