ಆಕೆ ಕೇವಲ ಕೇಳಿದ್ದು 500, ಆದರೆ ದೊರಕಿದ್ದು 51 ಲಕ್ಷ ರೂ.!
Tuesday, December 20, 2022
ತಿರುವನಂತಪುರ: ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕಲೂ ತನ್ನ ಬಳಿ ರೊಕ್ಕವಿಲ್ಲ. ಅದಕ್ಕಾಗಿ 500 ರೂ. ಕೊಡಬಹುದೇ' ಎಂದು ವಿಧಿಯಿಲ್ಲದೆ ಪುತ್ರನ ಶಿಕ್ಷಕಿ ಬಳಿ ಕೇಳಿಕೊಂಡಿದ್ದ ಮಹಿಳೆಯ ಖಾತೆಗೆ ಬರೋಬ್ಬರಿ 51 ಲಕ್ಷ ರೂ.ಗಳು ಜಮೆ ಆಗಿರುವ ಅಚ್ಚರಿಯ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಕೇರಳ ರಾಜ್ಯದ ಪಾಲಕ್ಕಾಡ್‌ನ ಕೊಟ್ಟನಾಡ್ ಎಂಬ ಗ್ರಾಮದ ನಿವಾಸಿ ಸುಭದಾ(46) ಎಂಬ ಮಹಿಳೆಗೆ ಮೂವರು ಮಕ್ಕಳು. ಕೂಲಿ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದ ಆಕೆಯ ಪತಿ ರಾಜನ್ ಕಳೆದ ಆಗಸ್ಟ್‌ನಲ್ಲಿ ಮೃತಪಟ್ಟಿದ್ದರು. ಆದಾದ ಬಳಿಕ ಕುಟುಂಬ ಅಕ್ಷರಶಃ ಬೀದ ಪಾಲಾಗಿತ್ತು. ಮಕ್ಕಳನ್ನು ಸಲಹುದೇ ಸುಭದ್ರಾಗೆ ದೊಡ್ಡ ಸವಾಲಾಗಿತ್ತು. ಮೂವರು ಮಕ್ಕಳ ಪೈಕಿ ಒಂದು ಮಗುವಿಗೆ ಸೆರೆಬ್ರಲ್ ಪಾಲ್ಸಿ ಎಂಬ ರೋಗ. ಆದ್ದರಿಂದ ಹಾಸಿಗೆ ಹಿಡಿದಿರುವ ಆ ಮಗುವನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದ್ದ ಕಾರಣ ಸುಭದ್ರಾ ಹೊರಗೆಲ್ಲೂ ಕೆಲಸಕ್ಕೆ ಹೋಗಲು ಸಾಧ್ಯವಿರಲಿಲ್ಲ
ಮಕ್ಕಳಿಗೆ ಊಟ ಹಾಕಲೂ ಗತಿಯಿಲ್ಲದ ಸ್ಥಿತಿಗೆ ಬಂದ ಕಾರಣ, ಬೇರೆ ದಾರಿ ಕಾಣದೇ ಸುಭದ್ರಾ ಇತ್ತೀಚೆಗೆ ತನ್ನ ಕಿರಿಯ ಮಗನ ಹಿಂದಿ ಟೀಚರ್ ಗಿರಿಜಾ ಹರಿಕುಮಾರ್‌ಗೆ ಕರೆ ಮಾಡಿ, 'ಮಕ್ಕಳಿಗೆ ಊಟ ಹಾಕಲು 500 ರೂ. ಕೊಡಬಹುದೇ' ಎಂದು ಕೇಳಿದ್ದರು. ತಕ್ಷಣ ಶಿಕ್ಷಕಿ ಸುಭದ್ರಾಗೆ 1,000 ರೂ. ನೀಡಿದ್ದಾರೆ. ಕೆಲ ದಿನಗಳ ಬಳಿಕ ಸುಭದಾ ಮನೆಗೆ ಹೋದ ಗಿರಿಜಾ ಹರಿಕುಮಾರ್ ಗೆ ಅವರ ಕುಟುಂಬದ ನೈಜ ಸ್ಥಿತಿ ನೋಡಿ ಖೇದವಾಯಿತು.
ಅಲ್ಲಿಂದ ಹಿಂದಿರುಗಿದ ಶಿಕ್ಷಕಿ ಗಿರಿಜಾ ಸಾಮಾಜಿಕ ಜಾಲತಾಣದಲ್ಲಿ ಈ ಕುಟುಂಬದ ವ್ಯಥೆಯನ್ನು ಬರೆದು ಸಹಾಯ ಮಾಡಲು ಇಚ್ಛಿಸುವವರು ಮಾಡಲಿ ಎಂದು ಸುಭದ್ರಾರ ಬ್ಯಾಂಕ್ ಖಾತೆ ವಿವರವನ್ನು ಅಪ್ ಲೋಡ್ ಮಾಡಿದ್ದರು. ಅದಾದ ಕೇವಲ 48 ಗಂಟೆಗಳಲ್ಲಿ ಸುಭದ್ರಾರ ಖಾತೆಗೆ ಬರೋಬ್ಬರಿ 51 ಲಕ್ಷ ರೂ. ಜಮೆಯಾಗಿದೆ. ಸಹಾಯ ಮಾಡಿದ ಎಲ್ಲರಿಗೂ ಸುಭದ್ರಾ ಮತ್ತು ಗಿರಿಜಾ ಧನ್ಯವಾದ ಹೇಳಿದ್ದಾರೆ.