ಶ್ರೀ ತಿರುಪತಿ ತಿರುಮಲ ದೇವಸ್ಥಾನ ಮುಂದಿನ ವರ್ಷ 6-8 ತಿಂಗಳುಗಳ ಕಾಲ ಬಂದ್: ಕಾರಣವೇನು ಗೊತ್ತೇ?
Tuesday, December 27, 2022
ಹೈದರಾಬಾದ್: ದೇಶಾದ್ಯಂತ ಕೋವಿಡ್ ಭೀತಿ ಮತ್ತೊಮ್ಮೆ ಆವರಿಸಿರುವ ಸಂದರ್ಭದಲ್ಲೇ ಶ್ರೀ ತಿರುಪತಿಯ ತಿರುಮಲ ಶ್ರೀವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿ 6 - 8 ತಿಂಗಳ ಕಾಲ ಬಂದ್ ಆಗಲಿದೆ ಎಂಬಂಥಹ ವಿಚಾರವೊಂದು ಸುದ್ದಿಯಾಗಿದೆ. ಆದರೆ ತಿರುಪತಿ ತಿರುಮಲ ದೇವಸ್ಥಾನದ ಗರ್ಭಗುಡಿಯನ್ನು ಮುಚ್ಚಲು ಬೇರೆಯೇ ಕಾರಣವಿದೆ.
ಶ್ರೀವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿ ಮೇಲಿನ ಮೂರು ಅಂತಸ್ತಿನ ವಿಮಾನಾಕೃತಿಯ ಗೋಪುರದ ಆನಂದ ನಿಲಯ ಬಂಗಾರದ ಕವಚವನ್ನು ನೂತನವಾಗಿ ಸಲುವಾಗಿ ದೇವಸ್ಥಾನದ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಇದಕ್ಕೆ ಸುದೀರ್ಘ ಸಮಯ ತಗುಲಲಿದೆ. ಈ ಹಿನ್ನೆಲೆಯಲ್ಲಿ 6 - 8 ತಿಂಗಳ ಕಾಲ ಗರ್ಭಗುಡಿಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಶ್ರೀ ವೆಂಕಟೇಶ್ವರ ದೇವರ ವಿಗ್ರಹವನ್ನು ಮುಖ್ಯ ದೇವಸ್ಥಾನದ ಬಳಿ ಇನ್ನೊಂದು ಕಡೆ ಪ್ರತಿಷ್ಠಾಪಿಸಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ. ಅಂದಹಾಗೆ ಮುಂದಿನ ವರ್ಷದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಆದರೆ ನಿಖರವಾಗಿ ಯಾವ ತಿಂಗಳಿನಿಂದ ಎಷ್ಟರವರೆಗೆ ಗರ್ಭಗುಡಿ ಬಂದ್ ಇರಲಿದೆ ಎನ್ನುವ ಬಗ್ಗೆ ಟಿಟಿಡಿ ಸದ್ಯದಲ್ಲೇ ಮಾಹಿತಿ ತಿಳಿಸಲಿದೆ.
1958ರಲ್ಲಿ ಆನಂದ ನಿಲಯಮ್ಗೆ ಬಂಗಾರದ ಕವಚವನ್ನು ಹೊದಿಸಲಾಗಿತ್ತು. ಆಗ ಬಂಗಾರ ಕವಚ ತೊಡಿಸಲು 8 ವರ್ಷ ತಗುಲಿದ್ದು, ಅದಾದ ಮೇಲೆ ಮತ್ತೆ ಬದಲಿಸಿರಲಿಲ್ಲ. 8ನೇ ಶತಮಾನದಲ್ಲಿ ಪಲ್ಲವ ರಾಜ ವಿಜಯ ದಂತಿವರ್ಮನ್ ಮೊದಲ ಸಲ ಈ ಬಂಗಾರದ ಕವಚನ್ನು ಹಾಕಿಸಿದ್ದ ಎಂದು ಹೇಳಲಾಗುತ್ತಿದೆ. ಅದಾದ ಬಳಿಕ ಸುಮಾರು 7 ಸಲ ಬಂಗಾರದ ಕವಚ ಬದಲಿಸಲಾಗಿದೆ ಇಲ್ಲವೇ ಮಾರ್ಪಡಿಸಲಾಗಿದೆ ಎನ್ನಲಾಗುತ್ತಿದೆ.