ಹತ್ಯೆಯಾದ 7 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ: ತಮ್ಮ ಮೇಲಿನ ಹತ್ಯೆಯ ಪ್ರಕರಣಕ್ಕೆ ತನಿಖಾಧಿಕಾರಿಗಳಾದ ಆರೋಪಿಗಳು!
Monday, December 12, 2022
ದೌಸಾ (ರಾಜಸ್ಥಾನ): ಏಳು ವರ್ಷಗಳ ಹಿಂದೆ ಕೊಲೆಯಾಗಿದ್ದಾಳೆಂದು ನಂಬಲಾಗಿದ್ದ ಮಹಿಳೆಯೊಬ್ಬಳು ಬದುಕಿ ಬಂದಿದ್ದಾಳೆ. ವಿಶೇಷವೆಂದರೆ ಈ ತನಿಖೆಯನ್ನು ಸ್ವತಃ ಆರೋಪಿಗಳೇ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಮೂಲಕ ಕೊಲೆ ಆರೋಪಿಗಳಿಬ್ಬರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜಸ್ಥಾನದ ದೌಸಾ ಜಿಲ್ಲೆಯ ಬೈಜುಪಾದ ಪೊಲೀಸ್ ಠಾಣಾ ವ್ಯಾಪ್ತಿಯ ವಿಶಾಲಾ ಗ್ರಾಮದಲ್ಲಿ ಆರತಿ ಎಂಬಾಕೆ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. 2015ರಲ್ಲಿ ಆರತಿ ಏಕಾಏಕಿ ನಾಪತ್ತೆಯಾಗಿದ್ದಾಳೆ. ಈ ಮಧ್ಯೆ ವೃಂದಾವನದ ನಾಗ್ಲಾ ಜಿಂಗಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ಗುರುತಿಸಲು ಅಸಾಧ್ಯವಾಗದೆ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದರು.
ಅಂತ್ಯಕ್ರಿಯೆಯಾದ ಕೆಲವು ದಿನಗಳ ಬಳಿಕ ಆರತಿಯ ತಂದೆ ವೃಂದಾವನ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಸಾವನ್ನಪ್ಪಿರುವುದು ತನ್ನ ಮಗಳು ಆರತಿ. ಆಕೆಯ ಪತಿಯೇ ಹಂತಕ. ಆಕೆ ದೌಸಾದ ಸೋನು ಸೈನಿಯೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ಬಳಿಕ ಆಕೆಯನ್ನು ಸೈನಿ ಹಾಗೂ ಉದಯಪುರ ನಿವಾಸಿ ಗೋಪಾಲ್ ಸಿಂಗ್ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಆರತಿಯ ತಂದೆ ನೀಡಿದ ದೂರಿನನ್ವಯ ಪೊಲೀಸರು ಸೋನು ಸೈನಿ ಮತ್ತು ಆತನ ಸ್ನೇಹಿತ ಗೋಪಾಲ್ ಸಿಂಗ್ ರನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು.
ಸೋನು ಸೈನಿ ಹಾಗೂ ಗೋಪಾಲ್ ಸಿಂಗ್ ಜಾಮೀನಿನ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ಆರತಿಯನ್ನು ಹುಡುಕಲು ಪ್ರಾರಂಭಿಸಿದ್ದರು. ಅವರು ಆರತಿ ತಂಗಿದ್ದ ಹಳ್ಳಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿ ಆತನಿಂದ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ. ಆ ಬಳಿಕ ಆಕೆಯ ಹುಡುಗಾಟದ ಬೆನ್ನತ್ತಿ ಹೋದಾಗ ಆರತಿ ಝಾನ್ಸಿ ಬಳಿಯ ಓರೈ ಎಂಬ ಗ್ರಾಮದಲ್ಲಿ ತಂಗಿದ್ದಾಳೆ ಎಂದು ತಿಳಿಯಿತು ಎಂದು ಕೊಲೆ ಆರೋಪ ಹೊತ್ತ ಸೈನಿ ಹೇಳಿದರು.
ಅದಕ್ಕಾಗಿ ಅವರಿಬ್ಬರೂ ತರಕಾರಿ ಮಾರಾಟಗಾರ ಮತ್ತು ಒಂಟೆ ಖರೀದಿಸುವವರಾಗಿ ಮಾರುವೇಷವನ್ನು ಹಾಕಿ ಆರತಿ ಇರುವ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಆರತಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿರುವುದು ಆರತಿ ಎಂದು ಖಚಿತಪಡಿಸಿಕೊಂಡ ಬಳಿಕ ಮೆಹಂದಿಪುರ ಪೊಲೀಸರನ್ನು ಸಂಪರ್ಕಿಸಿದೆ. ಅವರು ಯುಪಿ ಪೊಲೀಸರನ್ನು ಸಂಪರ್ಕಿಸಿ ಮಹಿಳೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಆಕೆಯ ಗುರುತನ್ನು ಸಾಬೀತುಪಡಿಸಲು ಪೊಲೀಸರು ಡಿಎನ್ಎ ಪ್ರೊಫೈಲಿಂಗ್ ಮಾಡಲು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ಆರತಿಯ ತಂದೆ ಹಾಕಿದ್ದ ಕೊಲೆ ಪ್ರಕರಣ ಹುಸಿಯಾಗಿದ್ದು, ಆಕೆ ಬದುಕಿರುವುದು ಪತ್ತೆಯಾಗಿದೆ. ಕುತೂಹಲಕಾರಿ ವಿಷಯವೆನೇಂದೆರೆ ಆರತಿ ಇಷ್ಟು ವರ್ಷಗಳ ಕಾಲ ತನ್ನ ಹೆತ್ತವರೊಂದಿಗೆ ಸಂಪರ್ಕದಲ್ಲಿದ್ದಳು. ಅಷ್ಟೇ ಅಲ್ಲ, ಸೈನಜ ಮತ್ತು ಗೋಪಾಲ್ ತಮ್ಮ ವಿರುದ್ಧದ ಕೊಲೆ ಪ್ರಕರಣದಲ್ಲಿ ಜೈಲಿವಾಸ ಅನುಭವಿಸುತ್ತಿರುವ ಸಂಗತಿಯನ್ನು ಅರಿತಿದ್ದಳು. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ನಾನು ಬಂಧನವಾಗಿರುವ ಆಘಾತವನ್ನು ತಾಳಲಾರದೆ ನನ್ನ ತಂದೆ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣದಿಂದಾಗಿ ನಾನು 20 ಲಕ್ಷ ರೂ. ಸಾಲದಲ್ಲಿದ್ದೇನೆ. ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಸೋನು ಸೈನಿ ಕಣ್ಣೀರು ಹಾಕಿದ್ದಾನೆ.