ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕೆ ಜಾಹಿರಾತು ಕಾರಣವಂತೆ: 75 ಲಕ್ಷ ರೂ. ಪರಿಹಾರ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಯುವಕ
ನವದೆಹಲಿ: ಯೂಟ್ಯೂಬ್‌ನಲ್ಲಿರುವ ಹೆಚ್ಚಿನ ಜಾಹೀರಾತಿನಿಂದಲೇ ತನಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿರುವ ಯುವಕನ ಮೇಲೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ 25 ಸಾವಿರ ರೂ. ದಂಡ ವಿಧಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆ ಬರೆಯಲೆಂದು ಆನಂದ್ ಕಿಶೋರ್ ಚೌಧರಿ ಎಂಬಾತ ಯೂಟ್ಯೂಬ್‌ನಲ್ಲಿ ಲಭ್ಯವಿರುವ ಅಧ್ಯಯನ ವೀಡಿಯೋಗಳನ್ನು ನೋಡಿ ಸಿದ್ಧತೆ ನಡೆಸಿದ್ದರು. ಆದರೆ, ಪರೀಕ್ಷೆ ಬರೆದರೂ ಅನುತ್ತೀರ್ಣರಾಗಿದ್ದರು. ಇದಕ್ಕೆ ಯೂಟ್ಯೂಬ್‌ನಲ್ಲಿ ಇರುವ ಹೆಚ್ಚಿನ ಪ್ರಮಾಣದ ಜಾಹಿರಾತು ಕಾರಣ ಎಂದು ಗೂಗಲ್ ವತಿಯಿಂದ ತನಗೆ 75 ಲಕ್ಷ ರೂ. ಪರಿಹಾರ ಕೊಡಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾ.ಸಂಜಯ ಕಿಶನ್ ಕೌಲ್ ಮತ್ತು ನ್ಯಾ.ಎ.ಎಸ್.ಓಕಾ ನೇತೃತ್ವದ ನ್ಯಾಯಪೀಠ “ನಿಮಗೆ ಮನಸ್ಸಿಲ್ಲದಿದ್ದರೆ ಜಾಹೀರಾತು ನೋಡಬೇಡಿ. ಏಕಾಗ್ರತೆ ಸಾಧಿಸಲು ಸಾಧ್ಯವಿಲ್ಲವೆಂದಾದಲ್ಲಿ ಅದು ಬೇಕೆ? ಇಂಥಹ ಅರ್ಜಿಗಳನ್ನು ಹಾಕಿ ನ್ಯಾಯಾಂಗದ ಸಮಯ ವ್ಯರ್ಥ ಮಾಡಬೇಡಿ. ಈ ಅರ್ಜಿಯನ್ನು ತಿರಸ್ಕರಿಸುತ್ತೇವೆ. ಅಲ್ಲದೆ ಅರ್ಜಿದಾರರು 4 ವಾರಗಳ ಒಳಗಾಗಿ 25 ಸಾವಿರ ರೂ. ದಂಡವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಕ್ಕೆ ಜಮೆ ಮಾಡಬೇಕು’ ಎಂದು ತೀರ್ಪು ನೀಡಿದೆ.