ಜೈಲು ಸೇರಲಿದ್ದಾರೆ 'ಅನುಭವ' ಸಿನಿಮಾ ಖ್ಯಾತಿಯ ಹಿರಿಯ ನಟಿ ಅಭಿನಯಾ
Thursday, December 15, 2022
ಬೆಂಗಳೂರು: ಹೆತ್ತವರೊಂದಿಗೆ ಸೇರಿ ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 'ಅನುಭವ' ಸಿನಿಮಾ ಖ್ಯಾತಿಯ ಹಿರಿಯ ನಟಿ ಅಭಿನಯಾ ಅವರಿಗೆ ಹೈಕೋರ್ಟ್ನಿಂದ ಎರಡು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಅಭಿನಯಾ ತಮ್ಮ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಬೇಡಿಕೆ ಇಟ್ಟು ಹೆತ್ತವರೊಂದಿಗೆ ಸೇರಿ ಕಿರುಕುಳ ನೀಡಿರುವ ಆರೋಪದಲ್ಲಿ ಹೈಕೋರ್ಟ್ ಶಿಕ್ಷೆ ಪ್ರಕಟಿಸಿದೆ. 2002ರಲ್ಲಿ ಅಭಿನಯಾ ಅತ್ತಿಗೆ ಲಕ್ಷ್ಮೀದೇವಿ ಪತಿಯ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು. 1998ರಲ್ಲಿ ಅಭಿನಯಾ ಸಹೋದರ ಶ್ರೀನಿವಾಸ್ ಅವರನ್ನು ಲಕ್ಷ್ಮೀದೇವಿ ವಿವಾಹವಾಗಿದ್ದರು. ಮದುವೆಯ ವೇಳೆ ವರಕ್ಷಿಣೆ ಪಡೆದಿದ್ದಲ್ಲದೆ, ಬಳಿಕವೂ ಪದೇಪದೆ ಹಣ ತರುವಂತೆ ಪತಿಯ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು.
ವಿವಾಹದ ಸಂದರ್ಭ 80 ಸಾವಿರ ರೂ. ಹಾಗೂ 250 ಗ್ರಾಂ ಚಿನ್ನಾಭರಣ ವರದಕ್ಷಿಣೆ ರೂಪದಲ್ಲಿ ಅಭಿನಯಾ ಕುಟುಂಬದವರು ಪಡೆದಿದ್ದರು. ಇದಾದ ಬಳಿಕ 1 ಲಕ್ಷ ರೂ.ಗೆ ಬೇಡಿಕೆ ಇಟ್ಟು 20 ಸಾವಿರ ಪಡೆದಿದ್ದಾರೆ. ಆದರೂ ಕಿರುಕುಳ ಮಾತ್ರ ನಿರಂತರವಾಗಿತ್ತು. ಹಣ ಕೊಟ್ಟರೂ ಸಹ ತನ್ನನ್ನು ತವರು ಮನೆಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ಲಕ್ಷ್ಮೀದೇವಿ ಆರೋಪಿಸಿದ್ದರು.
ಹೆರಿಗೆಗೆ ತವರು ಮನೆಗೆ ಹೋದ ಲಕ್ಷ್ಮೀದೇವಿಯನ್ನು ಮತ್ತೆ ತಮ್ಮ ಮನೆಗೆ ಕರೆಸಿಕೊಳ್ಳದ ಅಭಿನಯಾ ಕುಟುಂಬ, ಪತಿಯ ಮನೆಗೆ ಬಂದ ಲಕ್ಷ್ಮೀ ಹಾಗು ಆಕೆಯ ಪೋಷಕರಿಗೆ ಅವಮಾನ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಭಿನಯಾ ಸೇರಿದಂತೆ ಇಡೀ ಕುಟುಂಬದ ವಿರುದ್ಧ 2002 ರಲ್ಲಿ ಚಂದ್ರಾಲೇಔಟ್ ಠಾಣೆಯಲ್ಲಿ ಲಕ್ಷ್ಮೀದೇವಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿ, ಚಂದ್ರಾಲೇಔಟ್ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣಡ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಎಲ್ಲಾ ಆರೋಪಿಗಳಿಗೂ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿ ಬಳಿಕ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಲಕ್ಷ್ಮೀದೇವಿ ಹಾಗೂ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ. ಎ1 ಆರೋಪಿ ಶ್ರೀನಿವಾಸ್ ಹಾಗೂ ಎ2 ಆರೋಪಿ ರಾಮಕೃಷ್ಣ ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಮೂವರಿಗೆ ಮಾತ್ರ ಜೈಲು ಶಿಕ್ಷೆ ಪ್ರಕಟಿಸಿದೆ. ಆದ್ದರಿಂದ ಅಭಿನಯಾ ಅವರ ತಾಯಿ ಎ-3 ಆರೋಪಿ ಜಯಮ್ಮನಿಗೆ 5 ವರ್ಷ, ಎ-4 ಆರೋಪಿ ಚಲುವರಾಜ್ ಹಾಗೂ ಎ-5 ಆರೋಪಿ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ಹೈಕೋರ್ಟ್ ಆದೇಶ ಹೊರಡಿಸಿದೆ.