ಹಾಸ್ಟೆಲ್‌ನಲ್ಲಿದ್ದ ಪುತ್ರಿಯನ್ನು ನೋಡಲು ಮತ್ತೊಬ್ಬ ಪುತ್ರಿಯೊಂದಿಗೆ ಬೈಕ್‌ನಲ್ಲಿ ಹೊರಟ ದಂಪತಿ ಅಪಘಾತದಲ್ಲಿ ದುರಂತ ಅಂತ್ಯ
Monday, December 5, 2022
ಹೈದರಾಬಾದ್: ಹಾಸ್ಟೆಲ್‌ನಲ್ಲಿದ್ದ ಪುತ್ರಿಯನ್ನು ನೋಡಲು ಮತ್ತೊಬ್ಬ ಪುತ್ರಿಯೊಂದಿಗೆ ಬೈಕ್‌ನಲ್ಲಿ ಹೊರಟ ದಂಪತಿ ದುರಂತವಾಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ರಂಗಾರೆಡ್ಡಿ ಜಿಲ್ಲೆ ಶಮ್ಯಾಬಾದ್ ಮಂಡಲದ ಪೆದ್ದಾಶಪುರ್ ನಲ್ಲಿರುವ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ನಡೆದಿದೆ.
ಫರೂಕ್ ನಗರ ಮಂಡಲದ ಕಾದಿಯಲಕುಂಟ ಗ್ರಾಮದ ಗೋಪಾಲ್ (47) ಮತ್ತು ಅಂಜಲಿ (42) ದಂಪತಿ ಹಾಗೂ ಸ್ವಾತಿ(9) ಮೃತಪಟ್ಟವರು.
ಈ ದಂಪತಿಗೆ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ. ಇವರ ಮೂರನೇ ಪುತ್ರಿ ಮಧುಲತಾ, ಛಂಪಾಪೇಟೆ ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ವಿದ್ಯಾಭಾಸ ಮಾಡುತ್ತಿದ್ದಾಳೆ. ಈಕೆಯನ್ನು ನೋಡಲೆಂದು ಗೋಪಾಲ್ ಹಾಗೂ ಅಂಜಲಿ ತಮ್ಮ ಕಿರಿಯ ಪುತ್ರಿ ಸ್ವಾತಿ (9) ಯೊಂದಿಗೆ ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ಪೆದ್ದಾಶಪುರ್ ಪಟ್ಟಣದಲ್ಲಿ ಕ್ಯಾಂಟರ್ ಒಂದು ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದು, ಇವರ ಬೈಕ್‌ಗೆ ಗುದ್ದಿದೆ. ಪರಿಣಾಮ ಪುತ್ರಿ ಸಹಿತ ದಂಪತಿ ಕೆಳಗೆ ಬಿದ್ದು ದುರಂತ ಸಾವಿಗೀಡಾಗಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹಗಳನ್ನು ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕ್ಯಾಂಟರ್ ವಾಹನದ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಮತ್ತು ಪೊಲೀಸರು ತಿಳಿಸಿದ್ದಾರೆ.