
ನಡುರಸ್ತೆಯಲ್ಲಿಯೇ ಯುವಕನಿಂದ ಯುವತಿಯ ಮೇಲೆ ಮಚ್ಚಿನ ದಾಳಿ: ಬೆಚ್ಚಿಬಿದ್ದ ಸಾರ್ವಜನಿಕರು
Sunday, December 4, 2022
ಕೊಚ್ಚಿ: ಹಾಡಹಗಲೇ ನಡುರಸ್ತೆಯಲ್ಲಿ ಯುವಕನೊಬ್ಬ ಯುವತಿಯ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದು, ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದ ಘಟನೆ ಕೊಚ್ಚಿಯ ಕಲೂರಿನ ಆಜಾದ್ ನಗರದಲ್ಲಿ ನಡೆದಿದೆ.
ಮಾರ್ಗಮಧ್ಯೆ ಯುವಕ ಹಾಗೂ ಯುವತಿಯರಿಬ್ಬರ ಮಧ್ಯೆ ವಾಗ್ವಾದ ಬೆಳೆದಿದೆ. ಕೋಪಗೊಂಡ ಯುವಕ, ಮಚ್ಚಿನಿಂದ ಯುವತಿಯೊಬ್ಬಳ ತಲೆಗೆ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಜೊತೆಗಿದ್ದ ಯುವತಿ ಮತ್ತೊಬ್ವಳನ್ನು ರಕ್ಷಿಸುವಲ್ಲಿ ನೆರವಾಗಿದ್ದಾಳೆ. ಸದ್ಯ ಯುವತಿಯ ಕೈಗೆ ಗಾಯವಾಗಿದ್ದು, ಆಸ್ಪತ್ರೆ ದಾಖಲಾಗಿದ್ದಾಳೆ. ಸ್ನೇಹಿತೆಯ ಸಮಯ ಪ್ರಜ್ಞೆಯಿಂದ ಯುವತಿ ಗಂಭಿರ ಗಾಯವಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾಳೆ. ಇಲ್ಲವಾದಲ್ಲಿ ಆಕೆಯ ಜೀವಕ್ಕೇ ಆಪತ್ತು ಎದುರಾಗುತ್ತಿತ್ತು ಎಂದು ಈ ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಯುವಕನ ಮಚ್ಚಿನ ದಾಳಿಯಿಂದ ಯುವತಿ ರಕ್ತದ ಮಡುವಿನಲ್ಲಿ ರಸ್ತೆ ಮಧ್ಯೆಯೇ ಬಿದ್ದಿದ್ದಾಳೆ. ಈ ದೃಶ್ಯ ನಗರದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟರಲ್ಲೇ ಯುವಕ ತನ್ನ ಬೈಕ್ ಏರಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದೆ. ದಾಳಿಗೆ ಬಳಸಲಾದ ಮಚ್ಚನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಮಾರ್ಗ ಮಧ್ಯೆ ಇವರ ನಡುವೆ ಯಾವ ಕಾರಣಕ್ಕೆ ವಾಗ್ವಾದ ನಡೆದಿದೆ. ಮಚ್ಚಿನಿಂದ ಹಲ್ಲೆ ಮಾಡಲು ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ಹೊರಬರಬೇಕಿದೆ.