ಮಂಗಳೂರು: ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಜಲೀಲ್ ಮೃತದೇಹ ದಫನ
Sunday, December 25, 2022
ಮಂಗಳೂರು: ನಗರದ ಸುರತ್ಕಲ್ ನ ಕಾಟಿಪಳ್ಳದಲ್ಲಿ ಡಿ.24ರ ರಾತ್ರಿ ದುಷ್ಕರ್ಮಿಗಳಿಂದ ದಾಳಿಗೆ ಬಲಿಯಾದ ಜಲೀಲ್ ಅವರ ಮೃತದೇಹದ ದಫನ ಕಾರ್ಯ ಪಂಜಿಮೊಗರಿನಲ್ಲಿರುವ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಇಂದು ನಡೆಯಿತು.
ಸುರತ್ಕಲ್ ಕಾಟಿಪಳ್ಳದ ನಾಲ್ಕನೇ ಬ್ಲಾಕ್ ನಲ್ಲಿರುವ ಫ್ಯಾನ್ಸಿ ಅಂಗಡಿಯಲ್ಲಿದ್ದ ಸಂದರ್ಭ ದುಷ್ಕರ್ಮಿಗಳಿಬ್ಬರು ಜಲೀಲ್ ರನ್ನು ಚೂರಿಯಿಂದ ಇರಿದಿದ್ದರು. ತಕ್ಷಣ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಬಳಿಕ ಮುಂದಿನ ವ್ಯವಸ್ಥೆಗೆ ಅವರ ಮೃತದೇಹವನ್ನು ಎ ಜೆ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಯಿತು. ಇಂದು ಅವರ ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿ ತಂದು ಕಾಟಿಪಳ್ಳದ ಒಂಬತ್ತನೇ ಬ್ಲಾಕ್ ನ ಅವರ ನಿವಾಸದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಮೃತದೇಹವನ್ನು ಜಮಾಅತ್ ಗೆ ಸೇರಿದ ಕೂಳೂರು ಮುಹಿಯ್ಯುದ್ದೀನ್ ಜುಮ್ಮಾಮಸೀದಿಗೆ ಮೆರವಣಿಗೆಯಲ್ಲಿ ಕೊಂಡಯ್ಯಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಆಕ್ರೋಶಿತರು ಪಟ್ಟು ಹಿಡಿದಿದ್ದು, ಪೊಲೀಸ್ ಕಮಿಷನರ್ ಅವರನ್ನು ಸಮಾಧಾನಪಡಿಸಿ ಮೃತದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಮೆರವಣಿಗೆಯಲ್ಲಿ ಸಾಕಷ್ಟು ಕಾರು, ಬೈಕ್ ಗಳು ಸಾಥ್ ನೀಡಿತು. ಘೋಷಣೆಗಳು ಕೇಳಿ ಬಂತು. ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಗೆ ತಂದಿರುವ ಮೃತದೇಹವನ್ನು ನಮಾಜ್ ನೆರವೇರಿಸಿ ಮಸೀದಿಯ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.