ಚಲಿಸುತ್ತಿದ್ದ ರೈಲಿನೊಳಗೆ ತೂರಿ ಬಂದ ಕಬ್ಬಿಣದ ಸಲಾಕೆ ಚುಚ್ಚಿ ಪ್ರಯಾಣಿಕ ಸಾವು
Saturday, December 3, 2022
ನವದೆಹಲಿ: ಸಾವು ಎಂಬುದು ಎಲ್ಲಿ? ಹೇಗೆ? ಯಾವ ರೀತಿಯಲ್ಲಿ ಬರಬಹುದು ಎಂಬುದನ್ನು ಯಾರೂ ಊಹಿಸಲಸಾಧ್ಯ. ನಮ್ಮ ಪಕ್ಕದಲ್ಲಿಯೇ ಸಾವು ಧುತ್ತೆಂದು ಉದ್ಭವಿಸಬಹುದು ಎಂಬುದಕ್ಕೆ ಈ ಭಯಾನಕ ಘಟನೆಯೇ ತಾಜಾ ಉದಾಹರಣೆ.
ಹೌದು, ಪ್ರಯಾಣಿಕನೋರ್ವರು ರೈಲಿನ ಕಿಟಕಿ ಬಳಿಯ ಸೀಟಿನಲ್ಲಿ ಆರಾಮಾಗಿ ಕುಳಿತಿದ್ದ ವೇಳೆ ಕಿಟಕಿಯಿಂದ ತೂರಿ ಬಂದ ಕಬ್ಬಿಣ ಸಲಾಕೆಯೊಂದು ಪ್ರಯಾಣಿಕನ ಕುತ್ತಿಗೆಯನ್ನು ಇರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯೊಂದು ನಡೆದಿದೆ.
ಹರಿಕೇಶ್ ಕುಮಾರ್ ದುಬೆ ಮೃತಪಟ್ಟ ದುರ್ದೈವಿ. ಇವರು ಡಿ.02ರಂದು ದೆಹಲಿಯಿಂದ ಉತ್ತರ ಪ್ರದೇಶದ ಕಾನ್ಪುರ್‌ಕ್ಕೆ ತೆರಳುತ್ತಿದ್ದರು. ನಿಲಾಂಚಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಬಿಹಾರದ ದನ್ವಾರ್ ಮತ್ತು ಉತ್ತರ ಪ್ರದೇಶದ ಸೊಮ್ಮಾ ನಡುವೆ ಇದ್ದ ವೇಳೆ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ರೈಲ್ವೆ ಹಳಿಗಾಗಿ ಬಳಸುತ್ತಿದ್ದ ಕಬ್ಬಿಣದ ಸಲಾಕೆ ಕಿಟಕಿಯಿಂದ ತೂರಿ ಬಂದು ದುಬೆ ಕುತ್ತಿಗೆಯನ್ನು ನುಸುಳಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೇ ರೈಲನ್ನು ಆಲಿಗಢ ಜಂಕ್ಷನ್ ನಲ್ಲಿ ನಿಲ್ಲಿಸಲಾಯಿತು. ಬಳಿಕ ಅವರ ಮೃತದೇಹವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರ ಮಾಡಿ ಮಾಹಿತಿ ನೀಡಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.