ಉಡುಪಿ: ಕಂಠಪೂರ್ತಿ ಮದ್ಯ ಸೇವಿಸಿ ಶಾಲೆ ಜಗುಲಿಯಲ್ಲಿಯೇ ಮಲಗಿ ಅವಾಂತರ ಸೃಷ್ಟಿಸಿದ ಶಿಕ್ಷಕ
Wednesday, December 28, 2022
ಉಡುಪಿ: ಕಂಠಪೂರ್ತಿ ಮದ್ಯಸೇವನೆ ಮಾಡಿದ್ದ ಶಿಕ್ಷಕ ಶಾಲೆಯ ಜಗುಲಿಯಲ್ಲಿ ಪ್ರಜ್ಞೆ ಇಲ್ಲದೆ ಮಲಗಿರುವ ಘಟನೆ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದ್ದ ಕೃಷ್ಣಮೂರ್ತಿ ಎಂಬ ಶಿಕ್ಷಕ ವಿದ್ಯಾರ್ಥಿಗಳ ಮುಂದೆ ಕುಡಿದು ಮಲಗಿದವನು. ಈತನ ಅವಾಂತರವನ್ನು ಸ್ಥಳೀಯರು ವೀಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ಈ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
ಶಿಕ್ಷಕ ಕೃಷ್ಣಮೂರ್ತಿ ರಾತ್ರಿಯಿಡೀ ಮದ್ಯದ ಮತ್ತಿನಲ್ಲಿಯೇ ಶಾಲಾ ಜಗುಲಿಯಲ್ಲಿ ಮಲಗಿದ್ದಾನೆ. ಕಂಠಪೂರ್ತಿ ಕುಡಿದು ಮಲಗಿರುವ ಕೃಷ್ಣಮೂರ್ತಿಗೆ ಬೆಳಗಾದರೂ ಅರಿವಿಗೆ ಬಂದಿರಲಿಲ್ಲ. ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಬಂದಿದ್ದಾರೆ. ಈ ವೇಳೆ ಕೃಷ್ಣಮೂರ್ತಿ ಕುಡಿದ ಮತ್ತಿನಲ್ಲಿಯೇ ಮಲಗಿರುವುದು ಕಂಡು ಬಂದಿದೆ. ವಿಚಾರ ತಿಳಿದು ತಕ್ಷಣ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಶಿಕ್ಷಕನನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಕನ ದುರ್ವತನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿಕ್ಷಕ ಕೃಷ್ಣಮೂರ್ತಿ ಮಾಡಿಕೊಂಡಿರುವ ಅವಾಂತರದಿಂದ ಶಾಲೆಯ ಇತರೆ ಶಿಕ್ಷಕರು ಕೂಡಾ ತಲೆತಗ್ಗಿಸುವಂತಾಗಿದೆ. ಶಿಕ್ಷಕ ಕೃಷ್ಣಮೂರ್ತಿ ಮಾಡಿಕೊಂಡಿರುವ ವರ್ತನೆಯನ್ನು ಇದೀಗ ಸಾರ್ವಜನಿಕರು ಖಂಡಿಸುತ್ತಿದ್ದು, ತಪ್ಪಿತಸ್ಥ ಶಿಕ್ಷಕನನ್ನು ಅಮಾನತು ಮಾಡುವಂತೆ ಆಗ್ರಹ ಕೇಳಿ ಬಂದಿದೆ.