
ಶಾಮಿಯಾನ ಕಂಬ ಮುಟ್ಟಿದ ವಿದ್ಯುತ್ ಆಘಾತ: ಈಜು ಸ್ಪರ್ಧೆಗೆ ಬಂದ ವಿದ್ಯಾರ್ಥಿ ಸಾವು
Thursday, December 1, 2022
ರಾಮನಗರ: ಶಾಮಿಯಾನ ಕಂಬ ಮುಟ್ಟಿದ ವಿದ್ಯಾರ್ಥಿಯೊಬ್ಬ ವಿದ್ಯುತ್ ಆಘಾತಗೊಂಡು ಮೃತಪಟ್ಟ ದುರ್ಘಟನೆ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಗರ ಗ್ರಾಮದಲ್ಲಿ ಸಂಭವಿಸಿದೆ.
ಕೇರಳದ ತ್ರಿಶ್ಶೂರು ಮೂಲದ ವಿದ್ಯಾರ್ಥಿ ರೋಶನ್ ರಶೀದ್ (17) ಮೃತಪಟ್ಟ ದುರ್ದೈವಿ. ಕೆಂಗೇರಿ ಹೋಬಳಿಯ ಅಗರ ಗ್ರಾಮದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿದ್ದ ದಕ್ಷಿಣ ವಲಯ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರೋಶನ್ ಆಗಮಿಸಿದ್ದ. ಈಜು ಸ್ಪರ್ಧೆಯ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಶಾಮಿಯಾನ ಹಾಕಲಾಗಿತ್ತು.
ಶಾಮಿಯಾನದ ಕಂಬವನ್ನು ಮುಟ್ಟಿದ ರೋಷನ್‌ಗೆ ವಿದ್ಯುತ್ ಆಘಾಗೊಂಡು ಅಸ್ವಸ್ಥನಾಗಿದ್ದಾನೆ. ತಕ್ಷಣ ಆತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸುವ ವೇಳೆ ಆತ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮಗನ ಸಾವಿನಿಂದ ನೊಂದಿರುವ ಪಾಲಕರು ಸ್ಪರ್ಧೆ ಆಯೋಜಕರ ವಿರುದ್ಧ ಕಗ್ಗಲಿಪುರ ಠಾಣೆಗೆ ದೂರು ನೀಡಿದ್ದಾರೆ.