ಟಿವಿ ನೋಡುತ್ತಿದ್ದಾಗಲೇ ಪುತ್ರಿಯ ಸಾವಿನ ಸುದ್ದಿ ಬಿತ್ತರ: ಕುಸಿದು ಬಿದ್ದ ಕುಟುಂಬ
Friday, December 23, 2022
ಆಲಪ್ಪುಳ: ಕೇರಳದ ಅಲಪ್ಪುಝಾ ಮೂಲದ ರಾಷ್ಟ್ರೀಯ ಸೈಕಲ್ ಪೋಲೋ ಆಟಗಾರ್ತಿ ಫಾತಿಮಾ ನಿದಾ ವಿಷಕಾರಿ ಆಹಾರ ಸೇವಿಸಿ ಮಹಾರಾಷ್ಟ್ರದ ನಾಗುರದಲ್ಲಿ ಮೃತಪಟ್ಟಿದ್ದು, ಟಿವಿಯಲ್ಲಿ ಬಿತ್ತರವಾದ ಪುತ್ರಿಯ ಸಾವಿನ ಸುದ್ದಿ ತಿಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಫಾತಿಮಾ ನಿದಾ ವಾಕರಿಕೆ ಮತ್ತು ವಾಂತಿಯಿಂದ ಬಳಲಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟ ಪರಿಣಾಮ ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಫಾತಿಮಾ ನಿದಾ ತಂದೆ ಶಿಹಾಬುದ್ದೀನ್ ಚಾಲಕ ವೃತ್ತಿ ನಿರ್ವಹಿಸುತ್ತಿದ್ದರು. ಪುತ್ರಿ ವಿಷಕಾರಿ ಆಹಾರ ಸೇವಿಸಿ ಗಂಭೀರವಾಗಿರುವ ಮಾಹಿತಿ ದೊರಕುತ್ತಿದ್ದಂತೆ ಶಿಹಾಬುದ್ದೀನ್, ನಾಗುರಕ್ಕೆ ಹೋಗಲು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ನ್ಯೂಸ್ ಚಾನೆಲ್ ವೀಕ್ಷಿಸುತ್ತಿರುವ ವೇಳೆ ಪುತ್ರಿ ಮೃತಪಟ್ಟಿರುವ ಸುದ್ದಿ ನೋಡಿ ಅಲ್ಲಿಯೆ ಕುಸಿದು ಬೀಳುತ್ತಾರೆ. ವಿಮಾನ ನಿಲ್ದಾಣದಲ್ಲಿ ತಂದೆಯ ರೋದನೆ ನೋಡಿದ ಪ್ರಯಾಣಿಕರು ಕೂಡ ಕಂಬನಿ ಮಿಡಿದಿದ್ದಾರೆ.
ಇದಕ್ಕೂ ಮೊದಲು ಶಿಹಾಬುದ್ದೀನ್ ತಮ್ಮ ಪತ್ನಿ ಅನ್ಸಿಲಾ ಮತ್ತು ಪುತ್ರ ಮೊಹಮ್ಮದ್ ನಬೀಲ್ ಗೆ ಪುತ್ರಿಯ ಸ್ಥಿತಿಯ ಬಗ್ಗೆ ತಿಳಿಸಿರುವುದಿಲ್ಲ. ಆದರೆ, ನ್ಯೂಸ್ ಚಾನೆಲ್ ಮೂಲಕ ಪುತ್ರಿಯ ಸಾವಿನ ಸಂಗತಿ ತಿಳಿದು ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ರಾಷ್ಟ್ರೀಯ ಸೈಕಲ್ ಪೋಲೋ ಚಾಂಪಿಯನ್‌ಶಿಪ್‌ನ ಆಯೋಜಕರು ಕೇರಳ ತಂಡಕ್ಕೆ ವಸತಿ ವ್ಯವಸ್ಥೆ ಮಾಡುವುದನ್ನು ತಪ್ಪಿಸಿರುವುದರಿಂದ ಈ ದುರಂತ ಸಂಭವಿಸಿದೆ. ಸಂಸ್ಥೆಯ ಕಚೇರಿಗಳು ಮತ್ತು ಇತರ ಕೊಠಡಿಗಳಲ್ಲಿ ತಾತ್ಕಾಲಿಕ ಸೌಲಭ್ಯಗಳನ್ನು ಸ್ಥಾಪಿಸಲಾಗಿತ್ತು ಎಂದು ಇಂಡಿಯನ್ ಸೈಕಲ್ ಪೋಲೋ ತಂಡದ ಮಾಜಿ ನಾಯಕ ಪಿ.ಶಿವಕುಮಾರ್ ಆರೋಪಿಸಿದ್ದಾರೆ.