ಪತ್ನಿಯ ಅಂತ್ಯಕ್ರಿಯೆಗೆ ಹಣವಿಲ್ಲದೆ ಮೂಟೆಯಲ್ಲಿ ಹೊತ್ತೊಯ್ದ ಪತಿ...!
Thursday, December 8, 2022
ಚಾಮರಾಜನಗರ: ಅಂತ್ಯಕ್ರಿಯೆಗೆ ಹಣವಿಲ್ಲದೆ ಪತ್ನಿಯ ಮೃತದೇಹವನ್ನು ಪತಿಯೇ ಮೂಟೆಯಲ್ಲಿ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ವರದಿಯಾಗಿದೆ.
ಚಿಂದಿ ಆಯುವ ಕಾಳಮ್ಮ ಎಂಬಾಕೆ ಮೃತಪಟ್ಟಿದ್ದಾಳೆ. ಪತ್ನಿಯ ಅಂತ್ಯಸಂಸ್ಕಾರ ಮಾಡಲು ಚಿಕ್ಕಾಸು ಇಲ್ಲದ ಪತಿ ರವಿ ಆಕೆಯ ಮೃತದೇಹವನ್ನು ಮೂಟೆಕಟ್ಟಿ ಹೆಗಲ ಮೇಲೆ ಹೊತ್ತೊಯ್ದು ಪಟ್ಟಣದ ಸುವರ್ಣವತಿ ನದಿ ಕಡೆ ಅಂತ್ಯ ಸಂಸ್ಕಾರ ಮಾಡಲು ಹೋಗುತ್ತಿದ್ದ. ಈ ವಿಚಾರ ತಿಳಿದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಹತ್ತಿರದ ಆಲೆಮನೆಯಲ್ಲಿ ಕಳೆದ 15 ದಿನಗಳಿಂದ ರವಿ ಮತ್ತು ಆತನ ಪತ್ನಿ ಕಾಳಮ್ಮ ಉಳಿದುಕೊಂಡಿದ್ದರು. ಇವರು ಪ್ಲಾಸ್ಟಿಕ್, ಗುಜರಿ ಸಾಮಗ್ರಿಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.
ಪತ್ನಿ ಮೃತಪಟ್ಟ ಬಗ್ಗೆ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ, ನಾವು ನಂಜನಗೂಡಿನಲ್ಲಿದ್ದೆವು. ವಾರದ ಹಿಂದೆಯೇ ಆಕೆ ಬಂದಿದ್ದಳು. ನಾನು ಬಂದು ನೋಡಿದಾಗ ಕಾಳಮ್ಮ ಮೃತಪಟ್ಟಿದ್ದಳು. ನಮ್ಮವರೆಂದು ಯಾರೂ ಇಲ್ಲ. ನನ್ನ ಬಳಿ ಒಂದು ರೂಪಾಯಿಯೂ ಇರಲಿಲ್ಲ. ಅದಕ್ಕಾಗಿ ಮೃತದೇಹವನ್ನು ಹೊತ್ತುಕೊಂಡು ಬಂದೆ. ಬಳಿಕ ಜನರಲ್ಲಿ ಹಣ ಕೇಳಿ ಅಂತ್ಯ ಸಂಸ್ಕಾರ ಮಾಡಲು ಯೋಚಿಸಿದ್ದೆ. ಅಷ್ಟರಲ್ಲಿ ಸ್ಥಳೀಯರು ಬಂದರು. ಪೊಲೀಸರೂ ಬಂದು ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂದು ಹೇಳಿದರು.
ಮಹಜರಿಗಾಗಿ ಆಸ್ಪತ್ರೆಗೆ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ. ಅಲ್ಲದೆ ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.