ತಲೆಗೂದಲಿನಡಿ ಎಂ-ಸೀಲ್ ಹಚ್ಚಿಕೊಂಡು ಪೊಲೀಸ್ ಹುದ್ದೆ ದೈಹಿಕ ಪರೀಕ್ಷೆಗೆ ಬಂದಿರುವ 'ಕುಳ್ಳಿ' ಸಿಕ್ಕಿಬಿದ್ದಿರೋದು ಹೇಗೆ ಗೊತ್ತೇ?
Friday, December 16, 2022
ತೆಲಂಗಾಣ: ಬಹುತೇಕರು ಪೊಲೀಸ್ ಆಗಬೇಕು, ಖಾಕಿ ಧಿರಿಸು ಧರಿಸಿ ಖಡಕ್ ಅಧಿಕಾರಿ ಆಗಬೇಕೆಂದು ಕನಸು ಕಾಣುತ್ತಾರೆ. ಅದರಂತೆ ಕಷ್ಟಪಟ್ಟು ಹಗಲಿರುಳು ಓದಿ, ದೈಹಿಕವಾಗಿ ಸದೃಢರಾಗಿ ಪೊಲೀಸ್ ಆಗುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಪೊಲೀಸ್ ಆಗಬೇಕೆಂದು ಅನ್ಯಮಾರ್ಗವನ್ನು ಬಳಸಿ ಸಿಕ್ಕಿಬಿದ್ದಿದ್ದಾಳೆ.
ಪೊಲೀಸ್ ಆಗಲು ದೈಹಿಕ ಸದೃಢತೆಯೊಂದಿಗೆ ಎತ್ತರವೂ ಅತ್ಯಗತ್ಯ. ಆದರೆ ಈ ಮಹಿಳೆ ತಾನು ನಿರ್ದಿಷ್ಟ ಎತ್ತರ ಇಲ್ಲವೆಂದು ತಿಳಿದು ವಂಚನೆಯ ದಾರಿಗಿಳಿದಿದ್ದಾಳೆ. ಪೊಲೀಸ್ ಕಾನ್ ಸ್ಟೇಬಲ್‌ಗಳ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ ಈಕೆ ಎತ್ತರವಾಗಿ ಕಾಣಿಸಿಕೊಳ್ಳಲು ಕೂದಲಿನೊಳಗೆ ಎಂ-ಸೀಲ್ ಅಂಟಿಸಿಕೊಂಡು ಬಂದಿದ್ದಾಳೆ. ಎತ್ತರ ಮಾಪನದ ಸಮಯದಲ್ಲಿ ಕೂದಲಿನಲ್ಲಿ ಎಂ-ಸೀಲ್ ಅಂಟಿಸಿಕೊಂಡು ಬಂದಿರುವುದು ಪತ್ತೆಯಾಗಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಆಕೆಯನ್ನು ಪರೀಕ್ಷಿಸಿ ಅನರ್ಹಗೊಳಿಸಿದ್ದಾರೆ.
ಡಿಸೆಂಬರ್ 14 ಮಹಬೂಬ್‌ನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಮತ್ತು ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಗಾಗಿ ನಡೆಯುತ್ತಿತ್ತು. ಆಗ ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆದ ವೇಳೆ ಈ ಘಟನೆ ಸಂಭವಿಸಿದೆ. ಮಹಿಳಾ ಅಭ್ಯರ್ಥಿಯು ಎತ್ತರ ಅಳೆಯುವ ಇಲೆಕ್ಟ್ರಾನಿಕ್ ಸಾಧನದಲ್ಲಿ ನಿಂತಿದ್ದಾಳೆ. ಈ ವೇಳೆ ವಂಚನೆ ಬೆಳಕಿಗೆ ಬಂದಿದೆ. ಎತ್ತರ ಪರೀಕ್ಷಿಸಲು ಆಕೆಯನ್ನು ನಿಲ್ಲಿಸಿದಾಗ ಎತ್ತರ ಸೆನ್ಸಾರ್ ಸ್ಪಂದಿಸಿಲ್ಲ. ಆದ್ದರಿಂದ ಮಹಿಳಾ ಅಧಿಕಾರಿಯೊಬ್ಬರು ಈ ಮಹಿಳಾ ಅಭ್ಯರ್ಥಿಯ ತಲೆಯನ್ನು ಪರಿಶೀಲಿಸಿದ್ದಾರೆ. ಆಗ ಆಕೆಯ ಕೂದಲಿನ ಕೆಳಗೆ ಎಂ-ಸೀಲ್ ಪತ್ತೆಯಾಗಿದೆ ಎಂದು ಮಹಬೂಬ್ ನಗರ ಪೊಲೀಸರು ತಿಳಿಸಿದ್ದಾರೆ.