ವಿಶ್ವ ಜಾದೂ ಸಮ್ಮೇಳನದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ಅವರಿಗೆ ಎರಡು ಅಂತರ್ ರಾಷ್ಟ್ರೀಯ ಮಟ್ಟದ ಪುರಸ್ಕಾರ
ಥಾಯ್ ಲ್ಯಾಂಡಿನ ಬ್ಯಾಂಕಾಕ್ ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಜಾದೂ ಸಮ್ಮೇಳನದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ಅವರು ಪ್ರಸುತ ಪಡಿಸಿದ " ತುಳುನಾಡು ತುಡರ್ ಚೆಂಡು" ಜಾದೂವಿಗೆ ಎರಡು ಅಂತರ್ ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಲಭಿಸಿದೆ.
ಜಗತ್ತಿನ ಅತ್ಯಂತ ಪುರಾತನ ಜಾದೂ ಆಗಿರುವ ಕಪ್ಸ್ ಆಂಡ್ ಬಾಲ್ಸ್ ಮ್ಯಾಜಿಕ್ ಅನ್ನು ಕುದ್ರೋಳಿ ಗಣೇಶ್ ರವರು ನೂತನ ತಂತ್ರಗಾರಿಕೆಯ ಮೂಲಕ ತುಳು ಭಾಷೆ ಹಾಗೂ ಪಾಡ್ದನದ ಮೂಲಕ ಪ್ರಸ್ತುತ ಪಡಿಸಿದ ಸೃಜನಶೀಲತೆಯನ್ನು ಪರಿಗಣಿಸಿ ಅತ್ಯಂತ ಹೆಚ್ಚು ಸದಸ್ಯರನ್ನು ಹೊಂದಿರುವ ಜಗತ್ತಿನ ಬ್ರಹತ್ ಜಾದೂ ಸಂಸ್ಥೆ ಅನ್ನುವ ಹೆಗ್ಗಳಿಕೆ ಹೊಂದಿದ ಅಮೆರಿಕಾದ ಇಂಟರ್ ನ್ಯಾಶನಲ್ ಸೊಸೈಟಿ ಆಫ್ ಮ್ಯಾಜಿಕ್ ಸಂಸ್ಥೆಯು ಪ್ರತಿಷ್ಟಿತ "ಮರ್ಲಿನ್ ಮೆಡಲ್ " ನೀಡಿ ಗೌರವಿಸಿದೆ.
ತುಳುನಾಡು ತುಡರ್ ಚೆಂಡು ಜಾದೂವಿನ ಹೊಸತನವನ್ನು ಗಮನಿಸಿ ವಿಶ್ವ ಜಾದೂ ಸಮ್ಮೇಳನ ಸಂಘಟಿಸಿದ ಥಾಯ್ ಲ್ಯಾಂಡ್ ಇಂಟರ್ ನ್ಯಾಶನಲ್ ಅಕಾಡೆಮಿ ಆಫ್ ಮ್ಯಾಜಿಕ್ ಸಂಸ್ಥೆ " ಮೋಸ್ಟ್ ಓರಿಜಿನಲ್ ಆಕ್ಟ್ " ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಇಂಟರ್ ನ್ಯಾಶನಲ್ ಸೊಸೈಟಿ ಆಫ್ ಮ್ಯಾಜಿಕ್ ಸಂಸ್ಥೆಯ ಅಧ್ಯಕ್ಷರಾದ ಅಮೆರಿಕಾದ ಜಾದೂಗಾರ ಟೋನಿ ಹಸೀನಿ ಹಾಗೂ ಉಕ್ರೇನಿನ ಜಾದೂಗಾರ ವೊರೋನಿನ್ ರವರು ಕುದ್ರೋಳಿ ಗಣೇಶ್ ರವರಿಗೆ ಪುರಸ್ಕಾರ ನೀಡಿ ಗೌರವಿಸಿದರು. ಥಾಯ್ ಲ್ಯಾಂಡ್ ಇಂಟರ್ ನ್ಯಾಶನಲ್ ಅಕಾಡೆಮಿ ಆಫ್ ಮ್ಯಾಜಿಕ್ ಸಂಸ್ಥೆ ಅಧ್ಯಕ್ಷರಾದ ಜಾದೂಗಾರ ಮಮದಾ ಹಾಗೂ ಭಾರತದ ದಿಲ್ಲಿ ಸ್ಕೂಲ್ ಆಫ್ ಮ್ಯಾಜಿಕ್ ಸಂಸ್ಥೆಯ ಅಧ್ಯಕ್ಷರಾದ ಜಾದೂಗಾರ ರಾಜ್ ಕುಮಾರ್ ಉಪಸ್ಥಿತರಿದ್ದರು.
ಹಾಂಗ್ ಕಾಂಗ್ ಜಾದೂಗಾರರಾದ ಅಲ್ಬರ್ಟ್ ಟಾಮ್ ಮತ್ತು ಬಾಂಡ್ ಲೀ, ಇಂಡೋನೇಶಿಯಾದ ಜಾದೂಗಾರ ಹ್ಯಾಂಡಿ, ಸಿಂಗಾಪುರದ ಜಾದೂಗಾರ ಕಸ್ಸಿಡಿ ಲೀ ಮುಂತಾದವರು ಆಯ್ಕೆ ಸಮಿತಿಯಲ್ಲಿದ್ದರು.
ಬ್ಯಾಂಕಾಕ್ ನ ಫ್ಯಾಶನ್ ಐಲ್ಯಾಂಡ್ ಮಾಲ್ ಪ್ರಾಂಗಣದಲ್ಲಿ ನಡೆದ ಐದು ದಿನಗಳ ವಿಶ್ವ ಜಾದೂ ಸಮ್ಮೇಳನದಲ್ಲಿ ಜಗತ್ತಿನ ಹತ್ತಕ್ಕೂ ಹೆಚ್ಚು ದೇಶಗಳ ನೂರಾರು ಜಾದೂಗಾರರು ಭಾಗವಹಿಸಿದ್ದರು.