
ಓಡಿ ಹೋಗಿ ಪುತ್ರಿ ವಿವಾಹವಾಗಿದ್ದೇ ತಪ್ಪಾಯ್ತು: ಅಳಿಯನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದೇ ಬಿಟ್ಟ ಮಾವ
Monday, December 19, 2022
ಬಾಗಲಕೋಟೆ: ಅಳಿಯನನ್ನು ಮಾವನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಆಘಾತಕಾರಿ ಘಟನೆ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ಹನುಮಾನ್ ದೇವಸ್ಥಾನದ ಬಳಿ ನಡೆದಿದೆ.
ಅಳಿಯ ಭುಜಬಲ ಕರ್ಜಗಿ(34)ಯನ್ನು ಮಾವ ತಮ್ಮನ ಗೌಡ ಮರ್ಯಾದೆ ಹತ್ಯೆ ಮಾಡಿದ್ದಾನೆ.
ಕೊಲೆ ಆರೋಪಿ ತಮ್ಮನಗೌಡನ ಪುತ್ರಿ ಭಾಗ್ಯಶ್ರೀ ಇತ್ತೀಚೆಗೆ ಭುಜಬಲ ಕರ್ಜಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈತ ಅನ್ಯ ಸಮುದಾಯದವನಾಗಿದ್ದು ತಮ್ಮನಗೌಡನ ಆಕ್ರೋಶಕ್ಕೆ ಕಾರಣವಾಗಿತ್ತು. ಅಳಿಯ ಭುಜಬಲ ಕರ್ಜಗಿ ತಮ್ಮ ಪುತ್ರಿಯ ಬದುಕನ್ನೇ ಹಾಳು ಮಾಡಿದ್ದಾನೆಂದು ದ್ವೇಷ ಕಾರುತ್ತಿದ್ದ. ಇದೀಗ ಅಳಿಯ ಭುಜಬಲ ಕರ್ಜಗಿಯ ಕಣ್ಣಿಗೆ ಕಾರದ ಪುಡಿ ಎರಚಿ, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಒಂದೇ ಗ್ರಾಮಕ್ಕೆ ಸೇರಿದವರಾದ ಕ್ಷತ್ರಿಯ ಸಮುದಾಯದ ಭಾಗ್ಯಶ್ರೀ ಹಾಗೂ ಜೈನ ಸಮುದಾಯಕ್ಕೆ ಸೇರಿದ್ದ ಭುಜಬಲ ಕರ್ಜಗಿ ಪರಸ್ಪರ ಪ್ರೀತಿಸಿ ಒಂದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿ ವಿವಾಹ ಮಾಡಿಕೊಂಡಿದ್ದರು. ಬಳಿಕ ಟಕ್ಕೋಡ ಗ್ರಾಮದಲ್ಲಿಯೇ ಬಂದು ನೆಲೆಸಿದ್ದರು. ಪುತ್ರಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದರಿಂದ ತಮ್ಮನ ಗೌಡ ಅಳಿಯನ ಮೇಲೆ ಸೇಡು ಇಟ್ಟುಕೊಂಡಿದ್ದ. ಹೀಗಾಗಿ ಡಿ. 17ರಂದು ರಾತ್ರಿ 8.30ರ ಸುಮಾರಿಗೆ ಅಳಿಯನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಕೊಲೆ ಆರೋಪಿ ತಮ್ಮನಗೌಡನ ಕೃತ್ಯಕ್ಕೆ ಇನ್ನಿಬ್ಬರು ಸಾಥ್ ನೀಡಿದ್ದಾರೆ. ಘಟನೆಯ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.