ಅಮೇರಿಕಾ ಮೂಲದ ಪಾಕ್ ನಟನನ್ನು ವಿವಾಹವಾದ ಇಮ್ರಾನ್ ಖಾನ್ ಮಾಜಿ ಪತ್ನಿ
Saturday, December 24, 2022
ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಖಾನ್ ಅಮೆರಿಕಾ ಮೂಲದ ಪಾಕ್ ನಟ ಹಾಗೂ ವಿಡಂಬನಕಾರ ಮಿರ್ಜಾ ಬಿಲಾಲ್ ಎಂಬುವರನ್ನು ವಿವಾಹವಾಗಿದ್ದಾರೆ.
2014 - 15ರ ನಡುವೆ ಇಮ್ರಾನ್ ಖಾನ್ ರನ್ನು 49 ವರ್ಷದ ಬ್ರಿಟಿಷ್-ಪಾಕ್ ಪತ್ರಕರ್ತೆ ರೆಹಾಮ್ ಖಾನ್ ವಿವಾಹವಾಗಿ, ವಿಚ್ಛೇದನಕ್ಕೊಳಗಾಗಿದ್ದರು. ಇದೀಗ ಅಮೆರಿಕಾದ ಸಿಯಾಟಲ್‌ನಲ್ಲಿ ನಡೆದ ಸರಳ ನಿಖಾ ಸಮಾರಂಭದಲ್ಲಿ ಬಿಲಾಲ್ ರನ್ನು ಮದುವೆ ಆಗಿರುವುದಾಗಿ ಟ್ವಿಟರ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಬಿಲಾಲ್ ರೊಂದಿಗೆ ನಿಖಾ ಆಗಿರುವ ಫೋಟೋವನ್ನು ಸಹ ರೆಹಾಮ್ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಇಬ್ಬರು ಪರಸ್ಪರ ಕೈಹಿಡಿದಿದ್ದು ಫೋಟೋ ಮೇಲೆ ಜಸ್ಟ್ ಮ್ಯಾರೀಡ್ ಎಂದು ಬರೆಯಲಾಗಿದೆ. ಅಲ್ಲದೆ, ಇಬ್ಬರು ಜೊತೆಯಾಗಿ ಮದುವೆ ಧಿರಿಸಿನಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಅನೇಕ ಫೋಟೋಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಲಾಲ್ ಮತ್ತು ರೆಹಮಾ ಇಬ್ಬರಿಗೂ ಇದು ಮೂರನೇ ವಿವಾಹವಾಗಿದೆ. ಬಿಲಾಲ್ ಓರ್ವ ಕಾರ್ಪೊರೇಟ್ ವೃತ್ತಿಪರ. ಅವರು ಮಾಜಿ ಮಾಡೆಲ್ ಕೂಡ ಹೌದು. “ದಿ 4 ಮೆನ್ ಶೋ", “ದಿಲ್ ಪೇ ಮಟ್ ಲೇ ಯಾರ್” ಮತ್ತು “ನ್ಯಾಷನಲ್ ಏಲಿಯನ್ ಬ್ರಾಡ್‌ಕಾಸ್ಟ್” ನಲ್ಲಿ ನಟಿಸಿದ್ದಾರೆ.
ಇನ್ನು ರೆಹಮಾ, ಮನೋವೈದ್ಯ ಇಜಾಜ್ ರೆಹಮಾನ್ ಎಂಬುವರನ್ನು ಮೊದಲು ವಿವಾಹವಾಗಿದ್ದರು. 1993ರಲ್ಲಿ ಮದುವೆಯಾಗಿ 2005ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಇಮ್ರಾನ್ ಖಾನ್ ರನ್ನು 2014ರಲ್ಲಿ ಮದುವೆಯಾಗಿ 2015ರಲ್ಲೇ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಮೂಲಕ ಅವರಿಬ್ಬರು ಕೇವಲ 10 ತಿಂಗಳು ಮಾತ್ರ ಸಂಸಾರ ಮಾಡಿದರು.
ರೆಹಾಮ್ “ರೆಹಮ್ ಖಾನ್” ಎಂಬ ಶೀರ್ಷಿಕೆಯಲ್ಲಿ ತನ್ನ ಆತ್ಮಚರಿತ್ರೆಯನ್ನು 2018 ರಲ್ಲಿ ಪ್ರಕಟಿಸಿದರು. ಇದರಲ್ಲಿ ಪಾಕಿಸ್ತಾನ್ ತೆಪ್ರೀಕ್-ಇ-ಇನ್ಸಾಫ್ ನಾಯಕ ಇಮ್ರಾನ್ ಖಾನ್ ಜೊತೆಗಿನ ತನ್ನ ವಿವಾಹ, ಆತನ ಮಾದಕ ದ್ರವ್ಯ ಹಾಗೂ ದೌರ್ಜನ್ಯದ ಬಗ್ಗೆ ಬರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.