ವಿವಾಹವಾಗುವೆನೆಂದು ಕೈಕೊಟ್ಟ ವಿಚ್ಛೇದಿತೆಗೆ ಮಾಡಬಾರದ್ದು ಮಾಡಲು ಹೋದ ಮಂಡ್ಯದ ಯುವಕ: ಮಿಕ್ಸಿ ಸ್ಪೋಟಕ್ಕೆ ರೋಚಕ ತಿರುವು
Thursday, December 29, 2022
ಹಾಸನ: ಇಲ್ಲಿನ ಕುವೆಂಪುನಗರ ಬಡಾವಣೆಯ ಡಿಟಿಡಿಸಿ ಕೊರಿಯರ್ ಸೆಂಟರ್ ನಲ್ಲಿ ಕಳೆದ ಸೋಮವಾರ ಸಂಜೆ ನಡೆದಿರುವ ಮಿಕ್ಸರ್ ಗ್ರೈಂಡರ್ ಸ್ಫೋಟ ಪ್ರಕರಣಕ್ಕೆ ರೋಚಕ ತಿರುವು ದೊರೆತಿದೆ. ವಿಚ್ಛೇದಗೊಂಡ ಮಹಿಳೆಯ ಮೇಲಿನ ಪ್ರೀತಿ ಹಾಗೂ ಆಕೆಯ ಮೋಸಕ್ಕೆ ಪ್ರತಿಕಾರವಾಗಿ ಪಾಗಲ್ ಪ್ರೇಮಿಯೊಬ್ಬ ಮಾಡಿರುವ ಅವಾಂತರಕ್ಕೆ ಅಮಾಯಕ ಕುಟುಂಬ ಕಣ್ಣೀರು ಹಾಕುತ್ತಿದೆ. ಪಾಗಲ್ ಪ್ರೇಮಿ ಹಾಗೂ ಆತನನ್ನು ವಂಚಿಸಿದ್ದ ಮಹಿಳೆ ಇಬ್ಬರೂ ಈಗ ಪೊಲೀಸರ ವಶದಲ್ಲಿದ್ದಾರೆ.
ಹಾಸನದ ಕುವೆಂಪುನಗರ ಬಡಾವಣೆಯ 41 ವರ್ಷದ ವಿಚ್ಛೇದಿತ ಮಹಿಳೆ ವರಾನ್ವೇಷಣೆಗಾಗಿ ಮ್ಯಾಟ್ರಿಮೋನಿ ವೆಬ್‌ಸೈಟ್‌ವೊಂದರಲ್ಲಿ ತನ್ನ ಫೋಟೊ ಮತ್ತು ವಿವರ ಪ್ರಕಟಿಸಿದ್ದಳು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರು ನಿವಾಸಿ ಅನೂಪ್ ಕುಮಾರ್, ಮಹಿಳೆಯನ್ನು ಮೆಚ್ಚಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾನೆ. ಮೊದಲು ಮದುವೆಗೆ ಒಪ್ಪಿಗೆ ಸೂಚಿಸಿರುವ ಮಹಿಳೆ ಆತನೊಂದಿಗೆ ಕೆಲ ದಿನಗಳ ಕಾಲ ಪ್ರೀತಿಯಿಂದ ಓಡಾಡಿದ್ದಳು.
ಈ ಸಂದರ್ಭ ವಿವಿಧ ಕಾರಣ ಹೇಳಿ ಅನೂಪ್ ಕುಮಾರ್ ನಿಂದ ಆಕೆ ಲಕ್ಷಾಂತರ ರೂ. ವಸೂಲಿ ಮಾಡಿದ್ದಳು. ಆದರೆ ಕೆಲವೇ ದಿನಗಳಲ್ಲಿ ಅನೂಪ್‌ನ ಪ್ರೀತಿ ಮತ್ತು ಮದುವೆ ಪ್ರಸ್ತಾಪವನ್ನು ನಿರಾಕರಿಸಿ ಆಕೆ ದೂರವಾಗಿದ್ದಳು ಎನ್ನಲಾಗಿದೆ. ಪರಿಣಾಮ ತೀವ್ರ ಹತಾಶೆಗೊಂಡ ಅನೂಪ್‌ಕುಮಾರ್, ತಾನು ಕೊಟ್ಟಿರುವ ಹಣ ವಾಪಸ್ ಕೇಳಿದ್ದಾನೆ. ಆದರೆ ಮಹಿಳೆ ಏನೇನೊ ನೆಪವೊಡ್ಡಿ ನುಣಚಿಕೊಂಡಿದ್ದಾಳೆ. ಈ ನಡುವೆ ಹಾಸನಕ್ಕೂ ಬಂದ ಅನೂಪ್ ಕುಮಾರ್, ಮಹಿಳೆಯ ಮನೆ ಮುಂದೆ ಗಲಾಟೆ ಮಾಡಿದ್ದಾನೆ. ಆದ್ದರಿಂದ ಮಹಿಳೆ ಆತನ ವಿರುದ್ಧ ಪೊಲೀಸ್ ಠಾಣೆ ಮತ್ತು ರಾಜ್ಯ ಮಹಿಳಾ ಆಯೋಗಕ್ಕೂ ಮಹಿಳೆ ದೂರು ನೀಡಿದ್ದಳು. ಇದು ಅನೂಪ್‌ನನ್ನು ಮತ್ತಷ್ಟು ಕೆರಳಿಸಿತ್ತು. ತನಗೆ ಮೋಸ ಮಾಡಿದವಳಿಗೆ ಒಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿದ್ದಾನೆ.
ವಿಚ್ಛೇದಿತ ಮಹಿಳೆಗೆ ಮೊದಲು ಸೀರೆ ಕೊರಿಯರ್ ಮಾಡಿರುವ ಅನೂಪ್ ಕುಮಾರ್, ಎರಡನೇ ಬಾರಿ ಎಲ್‌ಇಡಿ ಬಲ್ಬ್ ಗಳ ಸೀರಿಯಲ್ ಸೆಟ್ ಕಳುಹಿಸಿದ್ದಾನೆ. ಪಾರ್ಸೆಲ್‌ನಲ್ಲಿ ವಸ್ತುಗಳೊಂದಿಗೆ ಹಣವನ್ನೂ ಇರಿಸಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಮೂರನೇ ಬಾರಿಗೆ ಮಿಕ್ಸರ್ ಗ್ರೈಂಡರ್ ನಲ್ಲಿ ಡಿಟೋನೇಟರ್ ಇಟ್ಟು ಕಳಿಸಿದ್ದ. ಆಕೆ ಸಾಯಬೇಕು, ಇಲ್ಲವೇ ಆಕೆಯ ಸೌಂದರ್ಯ ವಿರೂಪಗೊಳ್ಳಬೇಕು ಎಂಬುದು ಆತನ ಉದ್ದೇಶವಾಗಿತ್ತು.
ಬೆಂಗಳೂರಿನ ಪೀಣ್ಯ ಶಾಖೆ ನಾಗಸಂದ್ರದಿಂದ ಕಳುಹಿಸಿದವರ ವಿಳಾಸ ಇಲ್ಲದೆ, ರೊಸಾರಿಯೊ ಡ್ರೈಂಡರ್ ಹೆಸರಿನ ಮಿಕ್ಸ್ ಗ್ರೈಂಡರ್ ಬಾಕ್ಸ್ ಆಗಮಿಸಿದೆ. ಹಾಸನದ ಮಹಿಳೆಯ ಮನೆಗೆ ಡಿ.17ರಂದು ಹಾಸನದ ಡಿಟಿಡಿಸಿ ಪಾರ್ಸೆಲ್ ಆಫೀಸ್ ನಿಂದ ಬಂದಿತ್ತು. ಅದೇ ದಿನ ಡೆಲಿವರಿ ಬಾಯ್ ಮಹಿಳೆಯ ಮನೆಗೆ ಪಾರ್ಸೆಲ್ ಕೊಟ್ಟು ಬಂದಿದ್ದ.
ಕಳುಹಿಸಿರುವವರ ವಿಳಾಸ ಇಲ್ಲದೆ ಬಂದಿದ್ದ ಮೊದಲ ಎರಡು ಪಾರ್ಸೆಲ್‌ಗಳನ್ನು ಸ್ವೀಕರಿಸಿದ್ದ ಮಹಿಳೆ ಅವುಗಳನ್ನು ತೆರೆಯುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಳು. ಅದೇ ರೀತಿ ಮೂರನೇ ಬಾರಿ ಬಂದಿದ್ದ ಮಿಕ್ಸರ್ ಗ್ರೈಂಡರ್ ಬಾಕ್ಸ್ ತೆರೆದು ವಿಡಿಯೋ ಮಾಡಿಕೊಂಡಿದ್ದಳು. ಆದರೆ ಮಿಕ್ಸರ್ ಡ್ರೈಂಡರ್ ಬಳಸುವ ಸಾಹಸಕ್ಕೆ ಹೋಗಿರಲಿಲ್ಲ. ಒಂದು ವಾರ ಮಿಕ್ಸರ್ ಡ್ರೈಡರ್‌ರನ್ನು ಬಾಕ್ಸ್ ಸಹಿತ ಹಾಗೇ ಇಟ್ಟಿದ್ದ ಮಹಿಳೆಯು ಡಿ.26ರಂದು ಡಿಟಿಡಿಸಿ ಕೊರಿಯರ್ ಅಂಗಡಿಗೆ ಬಂದು “ಈ ಕೊರಿಯರ್ ನನಗೆ ಬೇಡ ವಾಪಸ್ ಕಳುಹಿಸಿ” ಎಂದು ಹಿಂದಿರುಗಿಸಿದ್ದಳು. ವಾಪಸ್ ಕಳುಹಿಸಲು 300 ರೂ. ಶುಲ್ಕ ಕೇಳಿದ್ದಕ್ಕೆ “ನನ್ನ ಬಳಿ ಹಣ ಇಲ್ಲ, ಏನಾದರೂ ಮಾಡಿಕೊಳ್ಳಿ” ಎಂದು ಮಿಕ್ಸಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಳು.
ತುಂಬು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸುವ ತರಾತುರಿಯಲ್ಲಿದ್ದ ಕೊರಿಯರ್ ಅಂಗಡಿ ಮಾಲಕ ಶಶಿಕುಮಾರ್, ಕೊರಿಯರ್ ಬಾಕ್ಸ್ ಎತ್ತಿಡಲು ಹೋಗಿದ್ದಾರೆ. ಆದರೆ ಬಾಕ್ಸ್ ಮೊದಲೇ ತೆರೆದಿದ್ದ ಕಾರಣ ಮಿಕ್ಸರ್ ಗ್ರೈಂಡರ್ ಜಾರಿ ಕೆಳಗೆ ಬಿದ್ದು ಸ್ಫೋಟಗೊಂಡಿದೆ. ಪರಿಣಾಮ ಶಶಿಕುಮಾರ್‌ರವರ ಬಲಗೈಯ ಎರಡು ಬೆರಳುಗಳು ಸಂಪೂರ್ಣ ಪುಡಿ ಆಗಿವೆ. ಯಾರದೋ ತಪ್ಪು, ಯಾರದೋ ದ್ವೇಷಕ್ಕೆ ಅಮಾಯಕ ಶಶಿಕುಮಾರ್ ತೀವ್ರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
“ವಯಸ್ಸಾದ ತಂದೆ ಅನಾರೋಗ್ಯದಿಂದ ಮನೆಯಲ್ಲಿ ನರಳುತ್ತಿದ್ದಾರೆ. ಪತ್ನಿ ಮಂಗಳವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಅವುಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಕೊರಿಯರ್ ಅಂಗಡಿಗೆ ಹಾಕಿದ್ದ ಲಕ್ಷಾಂತರ ರೂ. ಬಂಡವಾಳ ಹಾಳಾಗಿದೆ. ಯಾರೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ನನಗೆ ನ್ಯಾಯ ಕೊಡುವವರು ಯಾರು?” ಎಂದು ಶಶಿಕುಮಾರ್ ಕಣ್ಣೀರಿಟ್ಟಿದ್ದಾರೆ.