ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿರುವ ಅರ್ಚಕರ ಒಕ್ಕೂಟ
Tuesday, December 13, 2022
ಬೆಂಗಳೂರು: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ದೇಗುಲಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸುವಂತೆ ಕೋರಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟವು ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಎಚ್ಚರಿಕೆ ನೀಡಿದೆ.
ತಮಿಳುನಾಡಿನಾದ್ಯಂತ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸುವಂತೆ ಈಗಾಗಲೇ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಅದರಂತೆ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ದೇಗುಲಗಳಲ್ಲೂ ಮೊಬೈಲ್ ಫೋನ್ ನಿಷೇಧಿಸುವಂತೆ ಅರ್ಚಕರ ಒಕ್ಕೂಟವು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಸಲ್ಲಿಸಿದೆ. ಅಲ್ಲದೆ, ಮೊಬೈಲ್ ಫೋನ್ ನಿಷೇಧಿಸದಿದ್ದಲ್ಲಿ ಹೈಕೋಟ್‌ರ್ಗೆ ಅರ್ಜಿ ಸಲ್ಲಿಸುವ ಎಚ್ಚರಿಕೆಯನ್ನೂ ನೀಡಿದೆ.
ಕರ್ನಾಟಕದ ದೇವಸ್ಥಾನಗಳಲ್ಲಿ ಸದ್ಯ ಅರ್ಚಕರಿಗೆ ಮಾತ್ರ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಅದರಂತೆ ಭಕ್ತರಿಗೂ ಮೊಬೈಲ್ ಫೋನ್ ನಿಷೇಧ ಮಾಡಬೇಕು. ಅದರಂತೆ, ದೇವಸ್ಥಾನಗಳಲ್ಲಿ ಕಳವು ತಡೆಗಟ್ಟಲು ಸಾಧ್ಯ. ಜೊತೆಗೆ ಏಕಾಗ್ರತೆಯ ಪೂಜೆಗೂ ಅನುಕೂಲವಾಗುತ್ತದೆ ಎಂದು ಅರ್ಚಕರು ಅಭಿಪ್ರಾಯಪಟ್ಟಿದ್ದಾರೆ.