ಅಮೇರಿಕಾದ ಉದ್ಯೋಗ, ಕೋಟ್ಯಂತರ ರೂ. ಸಂಬಳ, ಐಷಾರಾಮಿ ಜೀವನ ತೊರೆದು ಸಂನ್ಯಾಸತ್ವ ಸ್ವೀಕರಿಸಿದ ಯುವಕ
Thursday, December 22, 2022
ಭೋಪಾಲ್: ಅಮೆರಿಕಾದಲ್ಲಿ ಐಟಿ ಉದ್ಯೋಗಿ, ವರ್ಷಕ್ಕೆ ಕೋಟಿ ರೂಪಾಯಿಗಿಂತಲೂ ಅಧಿಕ ಸಂಬಳ, ಲಕ್ಷುರಿ ಲೈಫ್... ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಕು?. ನಾವೆನಿಸಿಕೊಂಡಂತೆ ಬದುಕನ್ನು ಕಟ್ಟಿಕೊಳ್ಳಲು, ಎಂಜಾಯ್ ಮಾಡಲು ಇಷ್ಟಿದ್ದರೆ ಸಾಕಲ್ಲವೆ?. ಇಂತಹ ಬದುಕು ಎಲ್ಲರಿಗೂ ಬರುವುದಿಲ್ಲ. ಈ ರೀತಿಯ ಜೀವನ ಸಿಕ್ಕರೆ ಯಾರೊಬ್ಬರು ಕೂಡ ಬಿಟ್ಟುಕೊಡುವುದಿಲ್ಲ. ಆದರೆ, ಜೀವನದಲ್ಲಿ ಇಷ್ಟೆಲ್ಲ ಇದ್ದರೂ, ಎಲ್ಲವನ್ನು ತೊರೆಯುತ್ತಾರೆ ಅಂದರೆ ನೀವು ನಂಬುತ್ತೀರಾ? ಈ ಸುದ್ದಿಯನ್ನು ಓದಿದ ಮೇಲೆ ನೀವು ನಂಬಲೇಬೇಕು.
ಹೌದು, ಮಧ್ಯಪ್ರದೇಶ ರಾಜ್ಯದ 28 ವರ್ಷದ ಯುವಕ ಇಂತಹ ಎಲ್ಲಾ ಅವಕಾಶವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾನೆ. ಈ ಕಾಲದಲ್ಲೂ ಇಂತಹ ಜನರಿದ್ದಾರೆಯೇ ಎಂದರೆ, ಹೌದು ಎನ್ನಬೇಕು. ಈ ವಿಚಾರ ಕೇಳುವುದಕ್ಕೆ ವಿಚಿತ್ರವೆನಿಸಿದರೂ ಖಂಡಿತಾ ನಿಜ. ಈತನ ಹೆಸರು ಪ್ರಸ್ಸುಖ್ ಕಾಂತೇಡ್(28). ಮಧ್ಯಪ್ರದೇಶ ಮೂಲದ ಈತ ಇಂಜಿನಿಯರಿಂಗ್ ಮುಗಿಸಿದ ಬಳಿಕ ಅಮೆರಿಕಕ್ಕೆ ತೆರಳಿದ್ದಾನೆ. ಅಲ್ಲಿ ಡೇಟಾ ಸೈನ್ಸ್‌ನಲ್ಲಿ ಉನ್ನತ ವ್ಯಾಸಂಗ ಪಡೆದು, ವಾರ್ಷಿಕ 1.5 ಕೋಟಿ ರೂ. ಸಂಬಳದ ಉದ್ಯೋಗಕ್ಕೆ ಸೇರಿಕೊಂಡ. ಆದರೆ, ಪ್ರಸ್ಸುಖ್ ಕಾಂತೇಡ್ ಗೆ ಈ ಕೆಲಸ ತೃಪ್ತಿ ತರಲಿಲ್ಲ. ಇದು ತಾನು ಬಯಸಿದ ಜೀವನವಲ್ಲ ಎಂದೆನಿಸಿತು. ಕೋಟಿ ಸಂಬಳದ ಉದ್ಯೋಗವಿದ್ದರೂ ಸಂತೋಷ ಮಾತ್ರ ಇರಲಿಲ್ಲ. ಜೀವನದಲ್ಲಿ ನೆಮ್ಮದಿ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟ. ಹಣದಿಂದ ಬರುವ ಐಷಾರಾಮಿ ಜೀವನದಿಂದ ವಿಮುಖರಾಗುವ ನಿರ್ಧಾರಕ್ಕೆ ಬಂದ.
ಈ ಕಾರಣದಿಂದ ಕಾಂತೇಡ್, ಕೋಟಿ ರೂ. ಸಂಬಳದ ಉದ್ಯೋಗವನ್ನು ತೊರೆದು ಅಮೆರಿಕವನ್ನು ಬಿಟ್ಟು ಭಾರತಕ್ಕೆ ಮರಳಿದ. ಆಡಂಬರ ಮತ್ತು ಪ್ರಾಪಂಚಿಕ ಸಂತೋಷಗಳನ್ನು ತ್ಯಜಿಸಿದನು. ಅಹಿಂಸೆ ಬೋಧಿಸುವುದನ್ನು ಗುರಿಯಾಗಿಸಿಕೊಂಡ. ಮೋಕ್ಷಕ್ಕೆ ಇದೇ ಹಾದಿ ಅಂದುಕೊಂಡ. ಕ್ಷಣಿಕ ಬದುಕಿನಲ್ಲಿ ಆನಂದವೇ ಇಲ್ಲದಿರುವಾಗ, ಕೋಟಿಗಟ್ಟಲೆ ಸಂಪಾದಿಸಿದರೂ ನೆಮ್ಮದಿ ಇಲ್ಲದಿರುವಾಗ, ಸಂತನಾಗುವುದು ಅಥವಾ ಸನ್ಯಾಸಿಯಾಗಿ ಬಾಳುವುದೇ ಸರಿಯಾದ ದಾರಿ ಎಂದು ಕಾಂತೇಡ್ ನಿರ್ಧರಿಸಿದ.
ಕಳೆದ ವರ್ಷ ಭಾರತಕ್ಕೆ ಮರಳಿದ ಕಾಂತೇಡ್, ಜೈನ ಸನ್ಯಾಸದಲ್ಲಿ ಆಸಕ್ತಿ ತೋರಿದ್ದಾನೆ. ಡಿಸೆಂಬರ್ 26 ರಂದು ಕಾಂತೇಡ್ ಜೈನ ಸನ್ಯಾಸಿಯಾಗಲಿದ್ದು, ಜೈನ ಧಾರ್ಮಿಕ ಗುರು ಜಿನೇಂದ್ರ ಮುನಿಯಿಂದ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಕಾಂತೇಡ್ ನೊಂದಿಗೆ ಇನ್ನಿಬ್ಬರು ಯುವಕರು ಕೂಡ ಸನ್ಯಾಸತ್ವ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ದೀಕ್ಷಾ ಕಾರ್ಯಕ್ರಮಕ್ಕೆ 50ಕ್ಕೂ ಅಧಿಕ ಮಂದಿ ಜೈನ ಸಂತರು ಆಗಮಿಸಲಿದ್ದಾರೆ.
ಸಾಮಾನ್ಯವಾಗಿ ಅಮೆರಿಕದ ಉದ್ಯೋಗ ಬಿಡುತ್ತೇನೆ. ಕೋಟಿಗಟ್ಟಲೆ ಸಂಬಳ ಬಿಟ್ಟು ಸನ್ಯಾಸ ಸ್ವೀಕರಿಸುತ್ತೇನೆ ಎಂದರೆ ಕುಟುಂಬಸ್ಥರು ಒಪ್ಪುವುದಿಲ್ಲ. ಆದರೆ, ಕಾಂತೇಡ್ ವಿಚಾರದಲ್ಲಿ ಆ ರೀತಿ ಆಗಲಿಲ್ಲ. ಅವರ ಕುಟುಂಬಸ್ಥರೂ ಸನ್ಯಾಸಿಯಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದಲ್ಲದೆ, ಅವರ ನಿರ್ಧಾರದಿಂದ ಅವರೆಲ್ಲರೂ ಸಂತೋಷಪಟ್ಟಿದ್ದಾರೆ.