ಕೊಲೆ ನಡೆದ ಮನೆಯ ಸಂಪ್ ನಲ್ಲಿ ಮತ್ತೊಂದು ಮೃತದೇಹ ಪತ್ತೆ: ಯಾರ ಮೇಲೆ ಅನುಮಾನವಿತ್ತೋ ಆತನೇ ಹತ್ಯೆಯಾಗಿದ್ದ
Monday, December 19, 2022
ಬೆಂಗಳೂರು: ನಗರದಲ್ಲಿ ಶನಿವಾರ ನಡೆದಿರುವ ಮನೆ ದರೋಡೆ ಪ್ರಕರಣದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಬೆನ್ನಿಗೇ ಮತ್ತೊಂದು ಶವ ಪತ್ತೆಯಾಗಿದೆ. ಅಷ್ಟಕ್ಕೂ ಯಾರು ಈ ಕೃತ್ಯ ಎಸಗಿದ್ದಾರೆಂಬ ಅನುಮಾನವಿತ್ತೋ ಆತನೇ ಶವವಾಗಿ ಮನೆಯ ಸಂಪ್‌ನಲ್ಲಿ ಪತ್ತೆಯಾಗಿರುವುದು ಪ್ರಕರಣವು ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ.
ಕೋರಮಂಗಲ 6ನೇ ಬ್ಲಾಕ್‌ನಲ್ಲಿ ಬಿಲ್ಡರ್ ರಾಜಗೋಪಾಲ ರೆಡ್ಡಿ ಎಂಬವರ ಮನೆಯಲ್ಲಿ ಶನಿವಾರ ಈ ಕೊಲೆ ನಡೆದಿತ್ತು. ದರೋಡೆ ಕೂಡ ನಡೆದಿತ್ತು. ಈ ಮನೆಯಲ್ಲಿ ಕೆಲಸಕ್ಕಿದ್ದ ದಾವಣಗೆರೆ ಮೂಲದ ಕರಿಯಪ್ಪ ಎಂಬಾತನ ಕೊಲೆ ನಡೆದಿತ್ತು. ಮನೆಮಂದಿ ಸಂಬಂಧಿಕರ ಮದುವೆ ಸಮಾರಂಭವೊಂದಕ್ಕೆ ಅನಂತಪುರಕ್ಕೆ ಹೋಗಿದ್ದ ವೇಳೆ ಈ ಪ್ರಕರಣ ನಡೆದಿತ್ತು. ದುಷ್ಕರ್ಮಿಗಳು ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ ನಗದು ದರೋಡೆ ನಡೆಸಿದ್ದರು. ಅಲ್ಲದೆ ಸಿಸಿಟಿವಿಯ ಡಿವಿಆರ್ ಕೂಡ ನಾಪತ್ತೆಯಾಗಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮನೆಯಲ್ಲಿ ಕೆಲಸಗಾರ ಕರಿಯಪ್ಪನೊಂದಿಗೆ ಅಸ್ಸಾಂ ಮೂಲದ ದಿಲ್ ಬಹದ್ದೂರ್ ಎಂಬಾತ ಸೆಕ್ಯೂರಿಟಿ ಗಾರ್ಡ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ. ಕರಿಯಪ್ಪ ಮೂವತ್ತು ವರ್ಷಗಳಿಂದ ರಾಜಗೋಪಾಲರೆಡ್ಡಿ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದರೆ, ದಿಲ್ ಬಹದ್ದೂರ್ ಕಳೆದ ಎರಡು ವರ್ಷಗಳಿಂದ ಕೆಲಸಕ್ಕಿದ್ದ. ಬಹದ್ದೂರೇ ಕರಿಯಪ್ಪನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆಂಬ ಶಂಕೆ ಎಲ್ಲರಲ್ಲಿತ್ತು.
ಆದರೆ ಪೊಲೀಸರು ಮಹಜರು ನಡೆಸುವ ವೇಳೆ ಮನೆಯ ಸಂಪ್ ನಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ವಿಚಿತ್ರವೆಂದರೆ ದಿಲ್ ಬಹದ್ದೂರ್ ಕೂಡ ಕೊಲೆಯಾಗಿದ್ದ. ಇದೀಗ ಕೊಲೆಗಾರರು ಯಾರು, ಇವರಿಬ್ಬರನ್ನು ಬಿಟ್ಟು ಇನ್ಯಾರು ಮನೆಗೆ ಬಂದಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.