ಪ್ರೇಯಸಿಯನ್ನು ಚುಡಾಯಿಸಿದ ಸ್ನೇಹಿತನನ್ನೇ ಮುಗಿಸಿದ ಪ್ರಿಯಕರ
Friday, December 30, 2022
ಕೇರಳ: ಪ್ರೇಯಸಿಯನ್ನು ಚುಡಾಯಿಸಿದನೆಂಬ ಕಾರಣಕ್ಕೆ ಯುವಕನೋರ್ವನು ತನ್ನ ಇಂಜಿನಿಯರ್ ಸ್ನೇಹಿತನನ್ನು ಹತ್ಯೆಗೈದಿರುವ ಘಟನೆ ತ್ರಿಶ್ಶೂರ್ ನಲ್ಲಿ ನಡೆದಿದೆ.
ಅರುಣ್ ಲಾಲ್ ಎಂಬಾತ ಹತ್ಯೆಯಾದ ಇಂಜಿನಿಯರ್. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಟಿನು ಬಂಧಿತ ಆರೋಪಿ.
ತ್ರಿಶ್ಶೂರ್ ಜಿಲ್ಲೆಯ ಪುಟ್ಟೆಕ್ಕರ ಎಂಬಲ್ಲಿ ಟಿನು ಹಾಗೂ ಅರುಣ್ ಲಾಲ್ ಎಂದಿನಂತೆ ಸಂಜೆಯ ವೇಳೆ ಜೊತೆಯಾಗಿ ಮದ್ಯ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಟಿನು ತನ್ನ ಪ್ರೀತಿಯ ವಿಚಾರವನ್ನು ಅರುಣ್ ಲಾಲ್ ನೊಂದಿಗೆ ಪ್ರಸ್ತಾಪಿಸಿದ್ದಾನೆ. ಅರುಣ್ ಲಾಲ್ ಪ್ರೀತಿ ಹಾಗೂ ಹುಡುಗಿಯ ವಿಚಾರವನ್ನು ಮುಂದಿಟ್ಟುಕೊಂಡು ಗೇಲಿ ಮಾಡಿದ್ದಾನೆ. ಈ ಮಾತುಕತೆಯ ಬಳಿಕ ಆತನ ಪ್ರೇಯಸಿ ಟಿನು ಸಿಕ್ಕಾಗೆಲ್ಲಾ ಮಾತನಾಡದೆ ಅಂತರ ಕಾಯ್ದುಕೊಳ್ಳುತ್ತಿದ್ದಳು. ತನ್ನ ಪ್ರೇಯಸಿಯ ಈ ರೀತಿಯ ವರ್ತನೆಗೆ ಅರುಣ್ ಲಾಲ್ ನೇ ಕಾರಣ ಎಂದು ಟಿನು ನಿರ್ಧರಿಸಿದ್ದಾನೆ. ಇದು ಆತನಲ್ಲಿ ಅರುಣ್ ಲಾಲ್ ಬಗೆಗೆ ದ್ವೇಷ ಬೆಳೆಯಲು ಕಾರಣವಾಗಿದೆ.
ಆದ್ದರಿಂದ ಟಿನು, ಅರುಣ್ ಲಾಲ್ ನನ್ನು ಬಾರ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರೂ ಎಂದಿನಂತೆ ಹರಟೆ ಹೊಡೆಯುತ್ತಾ ಮದ್ಯ ಸೇವಿಸಿದ್ದಾರೆ. ಕೊನೆಗೆ ತಾನೇ ನಿನ್ನನ್ನು ಮನೆಗೆ ಬಿಡುತ್ತೇನೆ ಎಂದು ಟಿನು ತನ್ನ ಬೈಕ್ ಹತ್ತಿಸಿಕೊಂಡಿದ್ದಾನೆ. ಆದರೆ ದಾರಿ ಮಧ್ಯೆ ಬೈಕ್ ನಿಲ್ಲಿಸಿ, ಅರುಣ್ ಲಾಲ್‌ನನ್ನು ನೆಲಕ್ಕೆ ತಳ್ಳಿದ್ದಾನೆ. ಬಳಿಕ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಸರಿಯಾಗಿ ಥಳಿಸಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅರುಣ್ ಲಾಲ್ ಮೃತಪಟ್ಟಿದ್ದಾನೆ.