ಹಳೆ ಪಿಂಚಣಿ ಜಾರಿಗೆ ಹೆಚ್ಚಿದ ಒತ್ತಡ: ಬೆಳಗಾವಿ ಅಧಿವೇಶನದಲ್ಲಿ ನಿರ್ಣಯಕ್ಕೆ ಒತ್ತಾಯ- NPS ನೌಕರರ ಹೋರಾಟಕ್ಕೆ ಸಿಐಟಿಯು ಬೆಂಬಲ
ಹಳೆ ಪಿಂಚಣಿ ಜಾರಿಗೆ ಹೆಚ್ಚಿದ ಒತ್ತಡ: ಬೆಳಗಾವಿ ಅಧಿವೇಶನದಲ್ಲಿ ನಿರ್ಣಯಕ್ಕೆ ಒತ್ತಾಯ- NPS ನೌಕರರ ಹೋರಾಟಕ್ಕೆ ಸಿಐಟಿಯು ಬೆಂಬಲ
ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ (NPS) ವ್ಯಾಪ್ತಿಗೆ ಒಳಪಟ್ಟ 2.50 ಲಕ್ಷ ನೌಕರರ ಪರವಾಗಿ ಕರ್ನಾಟಕ ರಾಜ್ಯ NPS ನೌಕರರ ಸಂಘವು ಡಿಸೆಂಬರ್19 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಆರಂಭಿಸಿರುವ ಅನಿರ್ದಿಷ್ಟ ಹೋರಾಟಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರವು ಬೆಳಗಾವಿಯಲ್ಲಿ ನಡೆಸುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಅಧಿಕೃತ ನಿರ್ಣಯ ಕೈಗೊಳ್ಳಬೇಕೆಂದು ಸಿಐಟಿಯು ಆಗ್ರಹಿಸಿದೆ.
2006 ರ ಬಳಿಕ ನೇಮಕಾತಿಗೊಂಡ ರಾಜ್ಯ ಸರ್ಕಾರಿ ನೌಕರರು PFRDA ರೂಪಿಸಿದ ಹೊಸ ಪಿಂಚಣಿ ವ್ಯವಸ್ಥೆಯಡಿ ಬರುತ್ತಾರೆ. ಹೀಗೆ ಹೊಸ ವ್ಯವಸ್ಥೆಗೆ ಸೇರಲ್ಪಟ್ಟ ನೌಕರರು ನೀಡಲ್ಪಟ್ಟ ವಂತಿಗೆ ಶೇ 40 ರಷ್ಟು ಹಣವನ್ನು PFRDA ಯು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತದೆ. ಆದರೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗುವ ಹಣವು ಸದಾ ಏರಿಳಿತ ಕಾಣುತ್ತದೆ ಹೀಗಾಗಿ ನೌಕರರಿಗೆ ಖಚಿತವಾದ ನಿವೃತ್ತಿ ವೇತನದ ಖಾತ್ರಿ ಇರುವುದಿಲ್ಲ ಹೀಗಾಗಿ ಈ ಯೋಜನೆಗೆ ಒಳಪಟ್ಟ ನಿವೃತ್ತಿ ಸರ್ಕಾರಿ ನೌಕರರ ಭವಿಷ್ಯವೇ ಅತಂತ್ರಗೊಳ್ಳಲಿದೆ. ಅಂದರೆ ಸರ್ಕಾರಿ ನೌಕರರಿಗೆ ನಿವೃತ್ತಿ ಖಚಿತ ಆದರೆ ಪಿಂಚಣಿ ಅನಿಶ್ಚಿತವಾಗಿರುತ್ತದೆ ಎನ್ನುವುದು ಈಗ ಸಾಬೀತಾಗಿದೆ.
ಈ ಹಿನ್ನಲೆಯಲ್ಲಿ ದೇಶಾದ್ಯಂತ ಈ ಹೊಸ ಪಿಂಚಣಿ ವ್ಯವಸ್ಥೆಯಡಿಯಲ್ಲಿ ಬರುವ ಲಕ್ಷಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಹಳೆ ಪಿಂಚಣಿ ವ್ಯವಸ್ಥೆ ಮುಂದುವರಿಕೆಗಾಗಿ ಮತ್ತು PFRDA ಕಾಯ್ದೆ ರದ್ದತಿಗಾಗಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.
ಇದರ ಪರಿಣಾಮ ಈಗಾಗಲೇ ,ಪಂಜಾಬ್, ರಾಜಸ್ಥಾನ, ಸೇರಿ ಹಲವಾರು ರಾಜ್ಯಗಳು ಹಳೆ ಪಿಂಚಣಿಯನ್ನೇ ಮುಂದುವರೆಸುವ ತೀರ್ಮಾನ ಕೈಗೊಂಡಿವೆ. ಇದೇ ಬೇಡಿಕೆಯನ್ನು ಮುಂದೆ ಮಾಡಿ ಕರ್ನಾಟಕದ NPS ನೌಕರರು ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟದ ಹಾದಿಯಲ್ಲಿದ್ದಾರೆ ಮತ್ತು ಅದರ ಭಾಗವಾಗಿ ಇದೇ ಡಿಸೆಂಬರ್19 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಹೋರಾಟ ಆರಂಭಿಸಿರುವುದು ನ್ಯಾಯ ಸಮ್ಮತವಾಗಿದೆ.
ಆದರೆ ರಾಜ್ಯದ ಮುಖ್ಯಮಂತ್ರಿ ಗಳು ಲಕ್ಷಾಂತರ ನೌಕರರ ಕುಟುಂಬಗಳ ಬದುಕಿನ ಭವಿಷ್ಯದ ಪ್ರಶ್ನೆಯಾಗಿರುವ ಇದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡುವ ಬದಲು *ಹಳೆ ಪಿಂಚಣಿಯನ್ನು ಜಾರಿಗೊಳಿಸುವ ಪ್ರಸ್ತಾಪವಿಲ್ಲ* ಎಂದು ಲಿಖಿತವಾಗಿ ಹೇಳಿಕೆ ನೀಡಿರುವುದು ಸರಿಯಾದ ಕ್ರಮವಲ್ಲ.
ಇದು ಸರ್ಕಾರಕ್ಕೆ ನೌಕರರ ಬಗ್ಗೆ ಇರುವ ಅಸಡ್ಡೆ/ನಿರ್ಲಕ್ಷ್ಯ ಹಿಡಿದ ಕೈ ಗನ್ನಡಿಯಾಗಿದೆ ಕೇವಲ ಒಂದುಬಾರಿ ಆಯ್ಕೆಯಾದಶಾಸಕ-ಸಚಿವರಿಗೆ ಖಾತ್ರಿಯಾದ ಪಿಂಚಣಿ ಸೌಲಭ್ಯ ಇರುವಾಗ 20-30 ವರ್ಷ ದುಡಿಯುವ ಸರ್ಕಾರಿ ನೌಕರರಿಗೆ ಖಾತ್ರಿ ಇಲ್ಲದ ಪಿಂಚಣಿ ಯೋಜನೆಗೆ ದೂಡಿರುವುದು ಯಾವ ನ್ಯಾಯವೆಂದು ಸಿಐಟಿಯು ಪ್ರಶ್ನಿಸಿದೆ.
ಸರ್ಕಾರಿ ನೌಕರರು ತಮ್ಮ ಭವಿಷ್ಯಕ್ಕಾಗಿ ಸಾಮಾಜಿಕ ರಕ್ಷಣೆಯ ನಿಧಿಯಲ್ಲಿ ಕೂಡಿಡುವ ಹಣವನ್ನು ಶೇರು ಮಾರುಕಟ್ಟೆಯ ವ್ಯಾಪಾರದ ಜೂಜಿನಲ್ಲಿ ತೊಡಗಿಸುವ ಬಂಡವಾಳಿಗರ ಪರ ನೀತಿಯನ್ನು ಬಿಜೆಪಿ ಸರ್ಕಾರವು ಕೂಡಲೇ ಕೈಬಿಡಬೇಕು. NPS ಯೋಜನೆಯನ್ನು ರದ್ದು ಮಾಡಬೇಕು. ನಿವೃತಿಯ ನಂತರ ಖಚಿತ ಪಿಂಚಣಿಯನ್ನು ಖಾತರಿಗೊಳಿಸಲು ಮುಂದಾಗಬೇಕು ಎಂದು ಸಿಐಟಿಯು ಒತ್ತಾಯಿಸುತ್ತದೆ.
ವಿರೋಧ ಪಕ್ಷಗಳ ಜತೆ ಈ ಬಗ್ಗೆ ಚರ್ಚಿಸಿ ಸರ್ಕಾರಿ ನೌಕರರಿಗೆ NPS ರದ್ದು ಮಾಡುವ ನಿರ್ಣಯವನ್ನು ವಿಧಾನಸಭಾ ಅಧಿವೇಶನದಲ್ಲಿ ಸರ್ವಾನುಮತದಿಂದ ಕೈಗೊಳ್ಳಲು ಕ್ರಮವಹಿಸಬೇಕೆಂದು ಸಿಐಟಿಯು ಆಗ್ರಹಿಸಿದೆ.
ಬಿಜೆಪಿ ಸರ್ಕಾರವು ಈ ದಿಸೆಯಲ್ಲಿ ಕ್ರಮವಹಿಸದಿದ್ದಲ್ಲಿ ಸಿಐಟಿಯು ಕೂಡ ಮುಂಬರುವ ದಿನಗಳಲ್ಲಿ ನೌಕರರ ಜತೆ ಸೇರಿ ಹೋರಾಟಕ್ಕೆ ಮುಂದಾಗಲಿದೆ ಎನ್ನುವ ಎಚ್ಚರಿಕೆಯನ್ನು ನೀಡುತ್ತದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.