ಪಠಾಣ್ ಸಿನಿಮಾದ ಕೆಲ ಹಾಡುಗಳು, ದೃಶ್ಯಗಳ ಸನ್ನಿವೇಶ ಬದಲಿಸುವಂತೆ ಸೂಚಿಸಿದ ಸೆನ್ಸಾರ್ ಬೋರ್ಡ್
Thursday, December 29, 2022
ಮುಂಬೈ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಸಿನಿಮಾದ ಹಾಡುಗಳು ಸೇರಿದಂತೆ ಕೆಲವು ದೃಶ್ಯಗಳನ್ನು ಬದಲಾಯಿಸಿ, ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸುವಂತೆ ಸಿನಿಮಾ ನಿರ್ಮಾಪಕರಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಶಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೆ ಸಿನಿಮಾವನ್ನು ಸೆನ್ಸಾರ್ ಮಾಡಲು ಕಳುಹಿಸಲಾಗಿತ್ತು. ಪಠಾಣ್ ಸಿನಿಮಾದ ಹಾಡುಗಳ ಪೈಕಿ 'ಬೇಷರಮ್ ರಂಗ್' ಹಾಡಿನಲ್ಲಿನ ಕೇಸರಿ ಬಣ್ಣದ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ನೃತ್ಯ ಮಾಡಿರುವ ದೃಶ್ಯ ವಿವಾದಕ್ಕೆ ಕಾರಣವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ, ಸೆನ್ಸಾರ್ ಬೋರ್ಡ್ ಮಾರ್ಗಸೂಚಿಯ ಅನ್ವಯ ಪಠಾಣ್ ಸಿನಿಮಾ ಬಾಕಿ ಇರುವ ಮತ್ತು ಪೂರ್ಣ ಪ್ರಮಾಣದ ಪರಿಶೀಲನಾ ಪ್ರಕ್ರಿಯೆಗೆ ಒಳಗಾಗಿದೆ. ಚಿತ್ರಮಂದಿರಗಳಲ್ಲಿ ಚಿತ್ರದ ಬಿಡುಗಡೆಗೂ ಮುನ್ನ ಹಾಡುಗಳು ಸೇರಿದಂತೆ ಚಿತ್ರದಲ್ಲಿ ಸೂಚಿಸಿರುವ ಬದಲಾವಣೆಗಳೊಂದಿಗೆ ಪರಿಷ್ಕೃತ ಆವೃತ್ತಿಯನ್ನು ಪರಿಶೀಲನೆಗೆ ಸಲ್ಲಿಸುವಂತೆ ಚಿತ್ರದ ನಿರ್ಮಾಪಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
''ಸೆನ್ಸಾರ್ ಬೋರ್ಡ್ ಎಂದಿಗೂ ಸೃಜನಶೀಲ ಅಭಿವ್ಯಕ್ತಿ ಹಾಗೂ ಪ್ರೇಕ್ಷಕರ ಭಾವನೆಗಳೊಂದಿಗೆ ಸೂಕ್ತ ಸಮತೋಲನ ಕಾಯ್ದುಕೊಳ್ಳುವ ಬದ್ಧತೆ ಹೊಂದಿದೆ. ಎಲ್ಲ ಬಗೆಯ ಪಾಲುದಾರರೊಂದಿಗೆ ಅರ್ಥಪೂರ್ಣ ಮಾತುಕತೆ ಕೈಗೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆಯಿದೆ' ಎಂದು ಜೋಶಿ ಹೇಳಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಪಠಾಣ್' ಸಿನಿಮಾ ಜನವರಿ 2023ರಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರವನ್ನು ಹಿಂದಿ, ತಮಿಳು ಮತ್ತು ತೆಲುಗು ಅವತರಣಿಕೆಯಲ್ಲಿ ನಿರ್ಮಿಸಲಾಗಿದೆ.