ದಾರಿಯಲ್ಲಿ ಸಿಕ್ಕಿದ ಪೆನ್‌ಡ್ರೈವ್‌ನಲ್ಲಿತ್ತು ಆಕೆಯ ಖಾಸಗಿ ಫೋಟೋ, ವೀಡಿಯೋಗಳು: ಆ ಬಳಿಕ ಆತನಿಂದಾದ ಕಿರುಕುಳ ಅಷ್ಟಿಷ್ಟಲ್ಲ
ಬೆಂಗಳೂರು: ದಾರಿಯಲ್ಲಿ ದೊರೆತ ಪೆನ್‌ಡ್ರೈವ್‌ನಲ್ಲಿದ್ದ ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ಇಟ್ಟುಕೊಂಡು ಯುವತಿಗೆ ಹಣ ನೀಡುವಂತೆ ಬೆದರಿಸುತ್ತಿದ್ದ ಪೇಂಟರ್ ಅನ್ನು ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜೇಂದ್ರನಗರ ನಿವಾಸಿ ಶೋಯೆಬ್ (22) ಬಂಧಿತ ಆರೋಪಿ. ಈತನಿಂದ ಸಂತ್ರಸ್ತೆಗೆ ಸೇರಿರುವ ಪೆನ್‌ಡ್ರೈವ್ ಮತ್ತು ಆರೋಪಿಯ ಮೊಬೈಲ್, ಸಿಮ್‌ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.
ಪೇಂಟಿಂಗ್ ವೃತ್ತಿ ಮಾಡುತ್ತಿದ್ದ ಆರೋಪಿ ಶೋಯೆಬ್ ಗೆ ರಸ್ತೆಯಲ್ಲಿ ಪೆನ್‌ಡ್ರೈವ್ ಒಂದು ದೊರೆತಿದೆ. ಅದರಲ್ಲಿದ್ದ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡು ಈ ಕೃತ್ಯ ಎಸಗಿದ್ದಾನೆ ಮುಂಬೈ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ನಗರದ ಬೇಗೂರು ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಆಕೆ ರಸ್ತೆಯಲ್ಲಿ ತಮ್ಮ ಪೆನ್‌ಡ್ರೈವ್ ಕಳೆದುಕೊಂಡಿದ್ದಾರೆ. ಈ ಪೆನ್‌ಡ್ರೈವ್ ಆರೋಪಿ ಶೋಯೆಬ್ ಗೆ ಸಿಕ್ಕಿತ್ತು.
ಆತ ಅದನ್ನು ಕಂಪ್ಯೂಟರ್‌ನಲ್ಲಿ ಹಾಕಿ ಪರಿಶೀಲಿಸಿದಾಗ ಅದರಲ್ಲಿ ಆಕೆಗೆ ಸೇರಿರುವ ಖಾಸಗಿ ಫೋಟೋ ಮತ್ತು ವೀಡಿಯೋಗಳು ಪತ್ತೆಯಾಗಿವೆ. ಅಲ್ಲದೆ, ಸಂತ್ರಸ್ತೆಯ ಕೆಲ ದಾಖಲೆಗಳಲ್ಲಿದ್ದ ಮೊಬೈಲ್ ನಂಬರ್ ಹಾಗೂ ವಾಟ್ಸ್‌ಆ್ಯಪ್ ಡಿಟೇಲ್ಸ್‌ಗಳು ದೊರಕಿವೆ. ಬಳಿಕ ಆಕೆಯ ಮೊಬೈಲ್ ನಂಬರ್‌ನ ವಾಟ್ಸ್‌ಆ್ಯಪ್‌ಗೆ ಅಕೆಯ ಖಾಸಗಿ ಫೋಟೋ ಹಾಗೂ ವೀಡಿಯೊಗಳನ್ನು ಕಳುಹಿಸಿರುವ ಆರೋಪಿ ಜೊತೆಗೆ ಪೆನ್‌ಡ್ರೈವ್ ಫೋಟೊವನ್ನು ಕಳುಹಿಸಿ ಹಣಕ್ಕಾಗಿ ಬೆದರಿಕೆಯೊಡ್ಡಿದ್ದಾನೆ.
ಬಳಿಕ ಯುವತಿಗೆ ಪೆನ್‌ಡ್ರೈವ್ ವಾಪಸ್ ಕೊಡಬೇಕಾದರೆ, 70 ಸಾವಿರ ರೂ. ಕೊಡಬೇಕು. ನಾನು ನೀಡುವ ಕ್ಯೂಆರ್ ಕೋಡ್ ಗೆ ಸ್ಕ್ಯಾನ್ ಮಾಡಿ ಹಣ ಹಾಕಬೇಕು ಎಂದು ಕಿರುಕುಳ ನೀಡಲು ಆರಂಭಿಸಿದ್ದಾನೆ. ಪರಿಣಾಮ ಬೇಸತ್ತ ಸಂತ್ರಸ್ತೆ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.