ಮೂರು ತಿಂಗಳುಗಳ ಕಾಲ ವಿದ್ಯಾರ್ಥಿನಿಯಂತೆ ಕಾಲೇಜಿಗೆ ಹೋಗಿ ರ್ಯಾಗಿಂಗ್ ಪ್ರಕರಣ ಬೇಧಿಸಿದ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್
Monday, December 12, 2022
ಭೋಪಾಲ್: ಇಲ್ಲಿನ ಇಂದೋರ್ ನಗರದ ಮಹಾತ್ಮಾ ಗಾಂಧಿ ಸ್ಮಾರಕ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ರ್ಯಾಗಿಂಗ್ ಅನ್ನು ಮಟ್ಟ ಹಾಕಲು 24 ವರ್ಷದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಮೂರು ತಿಂಗಳುಗಳ ಕಾಲ ಕಾಲೇಜಿಗೆ ಹೋಗಿ ಕಾರ್ಯ ಸಾಧನೆ ಮಾಡಿದ್ದಾರೆ.
ಮಧ್ಯಪ್ರದೇಶದ ಶಾಲಿನಿ ಚೌಹಾಣ್(24) ರ್ಯಾಗಿಂಗ್ ಮಟ್ಟ ಹಾಕಲು ವಿದ್ಯಾರ್ಥಿನಿಯಂತೆ ನಟಿಸಿದ ಪೊಲೀಸ್ ಕಾನ್ ಸ್ಟೇಬಲ್. ಶಾಲಿನಿ ಚೌಹಾನ್ ಕಾಲೇಜಿಗೆ ತೆರಳಿ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಬೆರೆತು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ತಮ್ಮ ಕಾರ್ಯ ಸಾಧಿಸಿ ಸೈ ಅನಿಸಿಕೊಂಡಿದ್ದಾರೆ. ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಅಮಾನುಷವಾಗಿ ರ್ಯಾಗಿಂಗ್ ಮಾಡುತ್ತಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಅವರು ಈ ಸಂದರ್ಭ ಗುರುತಿಸಲು ಯಶಸ್ವಿಯಾಗಿದ್ದಾರೆ. ಪರಿಣಾಮ ಈ 11 ಹಿರಿಯ ವಿದ್ಯಾರ್ಥಿಗಳನ್ನು ಮೂರು ತಿಂಗಳುಗಳ ಕಾಲ ಕಾಲೇಜು ಮತ್ತು ಹಾಸ್ಟೆಲ್‌ನಿಂದ ಸಸ್ಪೆಂಡ್ ಮಾಡಲಾಗಿದೆ.
ಕಾಲೇಜಿನಲ್ಲಿ ರ್ಯಾಗಿಂಗ್ ನಡೆಯುತ್ತಿದ್ದ ಬಗ್ಗೆ ತಮಗೆ ಅನಾಮಧೇಯ ದೂರುಗಳು ಬರುತ್ತಿದ್ದವು. ಅಶ್ಲೀಲ ಕೃತ್ಯಗಳನ್ನು ಎಸಗುವಂತೆ ತಮ್ಮನ್ನು ಒತ್ತಾಯಪಡಿಸಲಾಗುತ್ತದೆ. ತಲೆದಿಂಬುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ರೀತಿಯಲ್ಲಿ ನಟಿಸುವಂತೆ ಬಲವಂತಪಡಿಸಲಾಗುತ್ತಿದೆ ಎಂದು ಕೆಲ ವಿದ್ಯಾರ್ಥಿಗಳು ದೂರಿದ್ದರು. ಇದನ್ನು ತಿಳಿದು ಪೊಲೀಸರು ಕ್ಯಾಂಪಸ್ಸಿಗೆ ತೆರಳಿದ್ದರೂ ಹೆದರಿ ಯಾರು ದೂರು ನೀಡಲು ಮುಂದೆ ಬಂದಿರಲಿಲ್ಲ. ಕೊನೆಗೆ ಶಾಲಿನಿ ಮತ್ತು ಕೆಲ ಪೊಲೀಸ್ ಸಿಬ್ಬಂದಿಯನ್ನು ಸಾದಾ ಉಡುಪಿನಲ್ಲಿ ಕಾಲೇಜಿಗೆ ಕಳುಹಿಸಿ ವಿದ್ಯಾರ್ಥಿಗಳಂತೆ ಇತರರೊಂದಿಗೆ ಬೆರೆಯುವಂತೆ ಮಾಡಲಾಯಿತು. ಈ ಸಂದರ್ಭ ಅಲ್ಲಿನ ಭಯಾನಕ ರಾಗಿಂಗ್ ಜಗತ್ತಿನ ಬಗ್ಗೆ ತಿಳಿದು ಬಂದಿತ್ತು.