-->
ಸುಳ್ಯ: ಕರ್ನಾಟಕದ ದಂತ ವೈದ್ಯಕೀಯ ವಿದ್ಯಾರ್ಥಿನಿಗೆ ಕೇರಳದ ವಿದ್ಯಾರ್ಥಿಗಳಿಂದ ರ್ಯಾಗಿಂಗ್, ಹಲ್ಲೆ

ಸುಳ್ಯ: ಕರ್ನಾಟಕದ ದಂತ ವೈದ್ಯಕೀಯ ವಿದ್ಯಾರ್ಥಿನಿಗೆ ಕೇರಳದ ವಿದ್ಯಾರ್ಥಿಗಳಿಂದ ರ್ಯಾಗಿಂಗ್, ಹಲ್ಲೆ


ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ವಿಚಾರವಾಗಿ ದಂತ ವೈದ್ಯಕೀಯ ವಿದ್ಯಾರ್ಥಿನಿಗೆ ರ್ಯಾಗಿಂಗ್ ಮಾಡಿ, ಜಾತಿ ನಿಂದಿಸಿ ಹಲ್ಲೆಗೈದಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸ್ ದೂರು ನೀಡಿದ್ದು ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

ಬೆಂಗಳೂರು ಮೂಲದ ಡಾ.ಪಲ್ಲವಿ ದಂತ ವೈದ್ಯಕೀಯ ವಿದ್ಯಾರ್ಥಿನಿ ಕೆವಿಜಿ ಕಾಲೇಜಿನಲ್ಲಿ ಮೂರನೇ ವರ್ಷ ಪದವಿ ವ್ಯಾಸಂಗ ಮಾಡುತ್ತಿದ್ದರು. ಡಾ.ಪಲ್ಲವಿಯವರು ಪರಿಶಿಷ್ಟ ಜಾತಿ ಮೆರಿಟ್‌ನಲ್ಲಿ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದರು. ಇದೇ ವಿಚಾರವಾಗಿ ಕೇರಳ ಮೂಲದ ವಿದ್ಯಾರ್ಥಿಗಳಾದ ಡಾ.ವಿಶಾಕ್, ಡಾ.ಐಶ್ವರ್ಯಾ ಆರ್, ಡಾ.ಆಲ್ಫಾ ಮೇರಿ ಮ್ಯಾಥ್ಯು, ಡಾ.ಡೆನೆಲ್ ಸೆಬಾಸ್ಟಿನ್, ಡಾ.ರಿಷಿಕೇಶ್ ಕಿರುಕುಳ ನೀಡುತ್ತಿದ್ದರು.

'ಡಿ.21ರಂದು ತಾನು ಹಾಗೂ ಅಣ್ಣ ಊಟ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅತ್ಯಂತ ಕೆಟ್ಟ ಪದಗಳಿಂದ ನಿಂದನೆ ಮಾಡಿದ್ದಾರೆ. ಈ ವೇಳೆ ಅಣ್ಣ ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನಾವು ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ವಿಭಾಗದ ಎಚ್‌ಒಡಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿನಿ ಡಾ.ಪಲ್ಲವಿ ದೂರಿದ್ದಾರೆ.

ರ್ಯಾಗಿಂಗ್ ಮಾಡಿ ಕಿರುಕುಳ ನೀಡಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿದ್ಯಾರ್ಥಿನಿ ಪ್ರಸ್ತುತ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿ ಪಲ್ಲವಿಯ ಬಲ ಕಿವಿ 62% ಕಿವುಡು, ಮೂತ್ರದಲ್ಲಿ ರಕ್ತಸ್ರಾವ ಹಾಗೂ ಬಲಕ್ಕೆ ಸ್ವಾಧೀನ ಕಳೆದುಕೊಂಡಿದೆ ಎಂದು ವೈದ್ಯರು ಹೇಳಿರುವುದು ವರದಿಯಾಗಿದೆ.

ಘಟನೆಯ ಬಗ್ಗೆ ಪಲ್ಲವಿ, ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಡಾ.ವಿಸಾಕ್ ಜಿ ಪಣಿಕ್ಕರ್ ಎಂಬಾತ ಪ್ರತಿದೂರು ದಾಖಲಿಸಿದ್ದಾನೆ. ಸದ್ಯ ಡಾ.ಪಲ್ಲವಿ, ಡಾ.ಹನೀಶ್, ಪಲ್ಲವಿ ಅಣ್ಣ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರತಿ ದೂರು ದಾಖಲಾಗಿದೆ. ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು - ಪ್ರತಿದೂರು ದಾಖಲಾಗಿದೆ. ಎರಡು ಕಡೆಯ ದೂರು ಪಡೆದು ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article