ಪೊಲೀಸರ ಅಮಾನವೀಯ ವರ್ತನೆಗೆ ತನ್ನೆರಡು ಕಾಲುಗಳನ್ನೇ ಕಳೆದುಕೊಂಡ ಬೀದಿ ಬದಿ ವ್ಯಾಪಾರಿ
Saturday, December 3, 2022
ಕಾನ್ಪುರ: ಪೊಲೀಸರ ಅಮಾನವೀಯ ವರ್ತನೆಯಿಂದ ಬೀದಿ ಬದಿ ವ್ಯಾಪರಿಯೊಬ್ಬ ರೈಲಿನಡಿ ಸಿಲುಕಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಭೀಕರ ಘಟನೆಯೊಂದು ಕಲ್ಯಾಣಪುರ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಈ ದುರ್ಘಟನೆಗೆ ಪೊಲೀಸರೇ ನೇರ ಕಾರಣವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಹೌದು, ಬೀದಿ ಬದಿ ವ್ಯಾಪಾರಿಯಾದ ಇರ್ಫಾನ್, ತರಕಾರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ರೈಲ್ವೇ ಪೊಲೀಸರು ಆತನ ತಕ್ಕಡಿ ಇನ್ನಿಯ ವಸ್ತುಗಳನ್ನು ರೈಲ್ವೇ ಹಳಿಯ ಮೇಲೆ ಎಸೆದಿದ್ದಾರೆ. ಆಗ ಇರ್ಫಾನ್ ತನ್ನ ವಸ್ತುಗಳನ್ನು ಸಂಗ್ರಹಿಸಿಕೊಳ್ಳಲು ರೈಲ್ವೇ ಹಳಿಗೆ ಇಳಿದಿದ್ದಾರೆ. ಈ ವೇಳೆ ಆಗಮಿಸಿದ ರೈಲು ಇರ್ಫಾನ್ ಕಾಲಿನ ಮೇಲೆಯೇ ಸಂಚರಿಸಿದೆ. ಪರಿಣಾಮ ಇರ್ಫಾನ್ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ.
ಇಂದಿರಾ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಶಾದಾಬ್ ಖಾನ್ ಜಿಟಿ ರಸ್ತೆಯಲ್ಲಿನ ಬೀದಿ ಬದಿ ವ್ಯಾಪಾರಿಗಳನ್ನು ಬೆನ್ನಟ್ಟಿದ್ದಾರೆ. ನಂತರ ವ್ಯಾಪಾರಿಯ ತಕ್ಕಡಿ, ತರಕಾರಿಗಳನ್ನು ರೈಲ್ವೇ ಹಳಿಯ ಮೇಲೆ ಎಸೆದಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳ ಹೇಳಿರುವುದು ವರದಿಯಾಗಿದೆ.
ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪಘಾತ ನಡೆಯುತ್ತಿದ್ದಂತೆ, ರೈಲ್ವೇ ಹಳಿ ಮೇಲೆ ಒದ್ದಾಡುತ್ತಿದ್ದ ಇರ್ಫಾನ್‌ನನ್ನು ಪೊಲೀಸ್ ಅಧಿಕಾರಿಯೊಬ್ಬರು ಬಂದು ಸಾರ್ವಜನಿಕರ ಸಹಾಯದಿಂದ ಮೇಲಕ್ಕೆ ಕರೆದುಕೊಂಡು ಬಂದಿದ್ದಾರೆ.