Subrhamanya :- ಕುಕ್ಕೆ ದೇವಳದಲ್ಲಿ ಕೇಂದ್ರ ಸಚಿವೆಯಿಂದ ಪಂಚಾಮೃತಮಹಾಭಿಷೇಕ ಸಮರ್ಪಣೆ
Tuesday, December 27, 2022
ಸುಬ್ರಹ್ಮಣ್ಯ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಂಗಳವಾರ ಮುಂಜಾನೆ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು.ಕುಟುಂಬ ಸಮೇತರಾಗಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಸಚಿವರು ಆರಂಭದಲ್ಲಿ ಸಂಕಲ್ಪ ನೆರವೇರಿಸಿದರು.
ಬಳಿಕ ಶ್ರೀ ದೇವರ ದರುಶನ ಪಡೆದು ಪಂಚಾಮೃತ ಮಹಾಭಿಷೇಕ ಸೇವೆಯನ್ನು ಸಮರ್ಪಿಸಿದರು.ನಂತರ ಮದ್ಯಾಹ್ನ ಶ್ರೀ ದೇವರ ಮಹಾಪೂಜೆ ವೀಕ್ಷಿಸಿ ಮಹಾಪೂಜಾ ಸೇವೆ ನೆರವೇರಿಸಿದರು.ಬಳಿಕ ಪ್ರಾರ್ಥನೆ ಸೇವೆ ನಡೆಸಿ ತನ್ನ ಅಭೀಷ್ಠೆಗಳನ್ನು ಶ್ರೀ ದೇವರಲ್ಲಿ ನಿವೇದಿಸಿದರು.ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಸಚಿವರಿಗೆ ಶಾಲು ಮತ್ತು ಶ್ರೀ ದೇವರ ಮಹಾಪ್ರಸಾದ ನೀಡಿ ಹರಸಿದರು.
ಗೌರವಾರ್ಪಣೆ:
ನಂತರ ಶ್ರೀ ಹೊಸಳಿಗಮ್ಮನ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು.ನಂತರ ಶ್ರೀ ದೇವಳದಲ್ಲಿ ಪ್ರಸಾದ ಬೋಜನ ಸ್ವೀಕರಿಸಿದರು.ತದನಂತರ ಆಡಳಿತ ಕಚೇರಿಗೆ ಭೇಟಿ ನೀಡಿದ ಸಚಿವರಿಗೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಶ್ರೀ ದೇವರ ಮಹಾಪ್ರಸಾದ ನೀಡಿ ಗೌರವಿಸಿದರು.ಇದರೊಂದಿಗೆ ಬ್ರಹ್ಮರಥ ಎಳೆದ ಪವಿತ್ರ ಬೆತ್ತವನ್ನು ಸಚಿವರಿಗೆ ನೀಡಿದರು.ಬಳಿಕ ಆದಿಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ ಸಚಿವರು ದರುಶನ ಪಡೆದು ಮೃತ್ತಿಕಾ ಪ್ರಸಾದ ಸ್ವೀಕರಿಸಿದರು.ಕೇವಲ ಕುಕ್ಕೆ ಕ್ಷೇತ್ರದಲ್ಲಿ ಸೇವೆ ನೆರವೇರಿಸಲು ಸಲುವಾಗಿಯೇ ದೆಹಲಿಯಿಂದ ಆಗಮಿಸಿದ ಸಚಿವರು ಬೆಳಗ್ಗೆ ೯ಗಂಟೆಗೆ ಕ್ಷೇತ್ರಕ್ಕೆ ಆಗಮಿಸಿ ಸಂಕಲ್ಪ ವಿದಿ ವಿಧಾನ ನೆರವೇರಿಸಿ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು.ಸುಮಾರು ೧ ಗಂಟೆಗೂ ಅಧಿಕ ಕಾಲ ಶ್ರೀ ದೇವರ ಪಂಚಾಮೃತ ಮಹಾಭಿಷೇಕ ವೀಕ್ಷಿಸಿದರು.ಬಳಿಕ ಸಂವಾದದಲ್ಲಿ ಭಾಗವಹಿಸಿ ಮತ್ತೆ ಶ್ರೀ ದೇವಳಕ್ಕೆ ಬಂದು ಮಹಾಪೂಜೆ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ಸಚಿವರೊಂದಿಗೆ ಅವರ ಪತಿ ಜುಬಿನ್ ಇರಾನಿ ಮತ್ತು ಮಗಳು ಜೊಯಿಸ್, ಆಂದ್ರ ಪ್ರದೇಶದ ಬಿಜೆಪಿ ವಕ್ತಾರ ತಿರುಪತಿ ಭಾನುಪ್ರಸಾದ್ ಆಗಮಿಸಿದ್ದರು. ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.