ಪಣಂಬೂರು ಬೀಚ್ ನಲ್ಲಿ ಅಶುಚಿತ್ವಗೊಂಡ ಆಹಾರ ಮಳಿಗೆಗಳು: ದಿಢೀರ್ ದಾಳಿಯಲ್ಲಿ 10ಅಧಿಕ ಅಂಗಡಿಗಳಿಗೆ ಬೀಗ ಮುದ್ರೆ ಹಾಕಿಸಿದ ಡಿಸಿ
ಮಂಗಳೂರು: ಪಣಂಬೂರು ಬೀಚ್ ನಲ್ಲಿ ಕಾರ್ಯನಿರ್ವಹಿಸುವ ಆಹಾರ ಮಳಿಗೆಗಳ ಮೇಲೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ದಿಢೀರ್ ದಾಳಿ ನಡೆಸಿ 10ಕ್ಕೂ ಅಧಿಕ ಆಹಾರ ಮಳಿಗೆಗಳಲ್ಲಿ ಸ್ವಚ್ಛತೆಯ ಕೊರತೆ ಕಂಡು ಬಂದಿರುವುದರಿಂದ ತಕ್ಷಣ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
ಆಹಾರ ಮಳಿಗೆಗಳು ಹಾಗೂ ಅಂಗಡಿಗಳಿಗೆ ಭೇಟಿ ನೀಡಿದ ಅವರು ಪರಿಸರ ಶುಚಿತ್ವವಿಲ್ಲದಿರುವುದನ್ನು ಕಂಡು ಕ್ಲಾಸ್ ತೆಗೆದುಕೊಂಡರು. ಜೊತೆಗೆ ಶೌಚಾಲಯದ ಮುಂಭಾಗ ಅಕ್ರಮವಾಗಿ ಕಟ್ಟಿಸಿರುವ ಗೋಬಿ ಮಂಚೂರಿ ಅಂಗಡಿಗೆ ತೆರಳಿದ ಅಲ್ಲಿ ಶುಚಿತ್ವದ ಕೊರತೆ ಕಂಡು ದಿಗ್ಭ್ರಮೆಗೊಂಡ ಅವರು ತಕ್ಷಣ ಅಂಗಡಿ ಮುಚ್ಚುವಂತೆ ಆದೇಶ ನೀಡಿದ್ದಾರೆ. ಕೊಳೆತ ತರಕಾರಿಗಳು, ಹಲವು ದಿನಗಳಿಂದ ಉಪಯೋಗಿಸುತ್ತಿರುವ ಅಡುಗೆ ಎಣ್ಣೆ ಹಾಗೂ ಶೌಚಾಲಯವನ್ನೇ ದಿನಸಿ ಸಾಮಾನುಗಳನ್ನು ಸಂಗ್ರಹಿಸಿ ಇಡಲು ಕೋಣೆಯನ್ನಾಗಿ ಪರಿವರ್ತಿಸಿದ್ದಾರೆ. ಅಲ್ಲದೆ ಗೋಬಿಯಲ್ಲಿ ಹುಳುಗಳಿದ್ದರೂ ಅದನ್ನೇ ಎಣ್ಣೆಯಲ್ಲಿ ಹುರಿದು ಪ್ರವಾಸಿಗರಿಗೆ ನೀಡುತ್ತಿರುವುದನ್ನು ಕಂಡು ದಿಗ್ಗಮೆಗೊಂಡರು.
ಫ್ರೀಜರ್ ಫಂಗಸ್ ಹಿಡಿದಿದ್ದರೂ ಅದರಲ್ಲೇ ಆಹಾರ ವಸ್ತುಗಳನ್ನು ಸಂಗ್ರಹಿಸಿ ಇಡಲಾಗುತ್ತಿತ್ತು. ಇದೆಲ್ಲವನ್ನೂ ಕಂಡು ಆಕ್ರೋಶಿತರಾದ ಜಿಲ್ಲಾಧಿಕಾರಿ 10ಕ್ಕೂ ಅಧಿಕ ಅಂಗಡಿಗಳಿಗೆ ಬೀಗ ಮುದ್ರೆ ಜಡಿಯುವಂತೆ ಆದೇಶಿಸಿದ್ದಾರೆ.