120 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವೀಡಿಯೋ ಚಿತ್ರೀಕರಿಸಿದ ಜಿಲೇಬಿ ಬಾಬಾನನ್ನು ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ
Thursday, January 12, 2023
ಫತೇಹಾಬಾದ್: ಇಲ್ಲಿನ ತೊಹಾನ ಪ್ರದೇಶದ ಬಾಲಕನಾಥ್ ದೇವಸ್ಥಾನದ ಮಹಂತ್ ಬಾಬಾ ಅಮರಪುರಿ ಆಲಿಯಾಸ್ ಬಿಲ್ಲು(63) ಎಂಬಾತನನ್ನು 120ಕ್ಕೂ ಅಧಿಕ ಮಹಿಳೆಯರನ್ನು ಅತ್ಯಾಚಾರವೆಸಗಿ ಕೃತ್ಯದ ವೀಡಿಯೋ ಚಿತ್ರೀಕರಣವೆಸಗಿರುವ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಘೋಷಿಸಿದೆ.
'ಜಲೇಬಿ ಬಾಬಾ' ಎಂದು ಕರೆಯಲ್ಪಡುವ ಈತನನ್ನು 2018ರಲ್ಲಿ ಫತೇಹಾಬಾದ್‌ನ ಶಕ್ತಿನಗರ್ ಪ್ರದೇಶದಲ್ಲಿರುವ ಆತನ ನಿವಾಸದಿಂದ ಪೊಲೀಸರು ಬಂಧಿಸಿದ್ದರು. ಆತ ಸಂತ್ರಸ್ತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಕೃತ್ಯಗಳ ಸಿಡಿಯನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸೀಡಿಗಳನ್ನು ಇರಿಸಿಕೊಂಡು ಸಂತ್ರಸ್ತೆಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು. ಈತನ ಮೊಬೈಲ್ ನಲ್ಲಿ 120ಕ್ಕೂ ಅಧಿಕ ಅಶ್ಲೀಲ ವೀಡಿಯೋಗಳೂ ಇದ್ದವೆಂದು ಪೊಲೀಸರು ತಿಳಿಸಿದ್ದಾರೆ.
ಜನರನ್ನು ಸಮ್ಮೋಹನಗೊಳಿಸುವ ಶಕ್ತಿ ತನಗಿದೆಯೆಂದು ಹೇಳಿ ತಿರುಗುತ್ತಿದ್ದ. ಈತ ಕನಿಷ್ಠ 120 ಶಿಷ್ಯೆಯರನ್ನು ಅಮಲು ಪದಾರ್ಥ ನೀಡಿ ಅತ್ಯಾಚಾರವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ 13 ವರ್ಷಗಳಿಂದ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಜಲೇಬಿಗಳನ್ನು ಮಾರಾಟ ಮಾಡುತ್ತಿದ್ದ. ಬಳಿಕ ತನ್ನ ಜಲೇಬಿ ಉದ್ಯಮವನ್ನು ಕೈಬಿಟ್ಟು ಭಟಿಯಾನಗರದಲ್ಲಿ ಮನೆಯೊಂದನ್ನು ಖರೀದಿಸಿ ಅದರ ತಳ ಅಂತಸ್ತಿನಲ್ಲಿ ದೇವಸ್ಥಾನ ನಿರ್ಮಿಸಿದ್ದ ಎನ್ನಲಾಗಿದೆ. ಆತನ ಲೈಂಗಿಕ ದೌರ್ಜನ್ಯದ ವೀಡಿಯೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.