ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಪತ್ತೆಗೆ ಸಹಕರಿಸಿದವರಿಗೆ 14 ಲಕ್ಷ ರೂ. ಬಹುಮಾನ ಘೋಷಿಸಿದ ಎನ್ಐಎ
ಕಾಸರಗೋಡು: ಬೆಳ್ಳಾರೆ ನಿವಾಸಿ, ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಪಿಎಫ್ಐ ಕಾರ್ಯಕರ್ತರನ್ನು ಪತ್ತೆಹಚ್ಚಲು ಸಹಾಯ ಮಾಡುವವರಿಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) 14. ಲಕ್ಷ ರೂ. ಬಹುಮಾನ ಘೋಷಿಸಿದೆ.
ಸುಳ್ಯ ಬುದು ಹೌಸ್‌ನ ಎಸ್. ಮುಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತಫ ಪೈಚಾರ್ ಮತ್ತು ಮಡಿಕೇರಿಯ ಎಂ.ಎಚ್.ತೌಫಲ್ ಬಗ್ಗೆ ಮಾಹಿತಿ ನೀಡಿದ್ದಲ್ಲಿ ತಲಾ 5 ಲಕ್ಷ ರೂ. ಬಹುಮಾನ ನೀಡಲಾಗುವುದು. ದಕ್ಷಿಣ ಕನ್ನಡದ ಕಲ್ಲುಮುಟ್ಟಲು ವೀಟಿಲ್ ಎಂ.ಆರ್. ಉಮ್ಮರ್ ಫಾರೂಕ್ ಅಲಿಯಾಸ್ ಉಮ್ಮರ್, ಸಿದ್ದಿಕ್ ಅಲಿಯಾಸ್ ಪೈಂಟರ್ ಸಿದ್ದಿಕ್ ಯಾನೆ ಗುಜರಿ ಸಿದ್ದಿಕ್ ಕುರಿತು ಮಾಹಿತಿ ನೀಡುವವರಿಗೆ ತಲಾ 2 ಲಕ್ಷ ರೂ. ಪಾರಿತೋಷಕ ನೀಡಲಾಗುವುದು ಎಂದು ಎನ್ಐಎ ನೊಟೀಸ್‌ನಲ್ಲಿ ತಿಳಿಸಿದೆ.
ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡಿರುವ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ನೊಟೀಸ್ ಪ್ರತಿಗಳನ್ನು ಕಲ್ಲಿಕೋಟೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಲಗತ್ತಿಸಲಾಗಿದೆ. 2022ರ ಜುಲೈ 26ರಂದು ರಾತ್ರಿ ವೇಳೆ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಲಾಗಿತ್ತು.