ಮಂಗಳೂರು: ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 20 ವರ್ಷದ ಕಠಿಣ ಕಾರಾಗೃಹ ಶಿಕ್ಷೆ
Wednesday, January 25, 2023
ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (ಎಫ್‌ಟಿಎಸ್‌ಸಿ-2 ಪೋಕ್ಸೊ) ಸಾಬೀತಾಗಿರುವ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ನಿವಾಸಿ ಬಾಬಿ (48) ಶಿಕ್ಷೆಗೊಳಗಾದ ಆರೋಪಿ.
ಆರೋಪಿ ಬಾಬಿ 2021ರ ಡಿ.19ರಿಂದ 2022ರ ಫೆ.26ರ ಮಧ್ಯೆ ಕಡಿರುದ್ಯಾವರ ಗ್ರಾಮದ ಎರ್ಮಾಳಪಲ್ಕೆ-ಮಠ ಎಂಬಲ್ಲಿನ ಅಪ್ರಾಪ್ತೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಾಲಕಿ 2022ರ ಮಾರ್ಚ್ 3ರಂದು ನೀಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ನೇತೃತ್ವದಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿ ಬಾಬಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ರಾಧಾಕೃಷ್ಣ ಆರೋಪಿ ಬಾಬಿ ತಪ್ಪೆಸಗಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ 20 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವೆಂಕಟರಮಣ ಸ್ವಾಮಿ ವಾದಿಸಿದ್ದರು.