ಪುತ್ರನ ಸಾವಿನ ಬಳಿಕ 28ರ ಸೊಸೆಯನ್ನೇ ವಿವಾಹವಾದ 70ರ ಮಾವ: ನೆಟ್ಟಿಗರಿಂದ ಭಾರೀ ಟೀಕೆ
Friday, January 27, 2023
ಲಕ್ನೋ: ಇತ್ತೀಚೆಗೆ ಮಾಜಿ ಶಾಸಕರೊಬ್ಬರು ಪುತ್ರ ಮಡಿದ ಬಳಿಕ ಸೊಸೆಗೆ ಬೇರೊಬ್ಬ ವರನೊಂದಿಗೆ ಮದುವೆ ಮಾಡಿ ಸುದ್ದಿಯಾಗಿದ್ದರು. ಇದೀಗ 70 ವರ್ಷದ ವೃದ್ಧನೊಬ್ಬ ತನ್ನ ಪುತ್ರ ಮಡಿದ ಬಳಿಕ 28ವರ್ಷದ ಸೊಸೆಯನ್ನೇ ವಿವಾಹವಾಗಿರುವ ವಿಚಿತ್ರ ಘಟನೆಯೊಂದು ಗೋರಖಪುರದ ಛಾಪಿಯಾ ಉಮಾರೋ ಗ್ರಾಮದಲ್ಲಿ ನಡೆದಿದೆ.
70 ವರ್ಷದ ವೃದ್ಧ ಕೈಲಾಶ್ ಯಾದವ್ ಬರ್ಹಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 12 ವರ್ಷದ ಹಿಂದೆ ಕೈಲಾಶ್ ಯಾದವ್ ಪತ್ನಿ ಮೃತಪಟ್ಟಿದ್ದು, ಒಂಟಿಯಾಗಿ ಜೀವನ ನಡೆಸುತ್ತಿದ್ದ. ಆ ಬಳಿಕ ಮೂರನೇ ಪುತ್ರನೂ ಮೃತಪಟ್ಟಿದ್ದಾನೆ. ಆದ್ದರಿಂದ ಆತನ ಪತ್ನಿ ಪೂಜಾ(28)ಳನ್ನೇ ಮಾವ ಕೈಲಾಸ್ ಯಾದವ್ ಮದುವೆಯಾಗಿದ್ದಾನೆ.
ಇಬ್ಬರು ಕೂಡ ಸ್ಥಳೀಯ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಒಬ್ಬರಿಗೊಬ್ಬರು ಹೂವಿನ ಹಾರವನ್ನು ಬದಲಾಯಿಸಿಕೊಂಡು ವಿವಾಹವಾಗಿ, ಆಕೆಯ ಹಣೆಗೆ ಸಿಂಧೂರನ್ನು ಇಟ್ಟಿದ್ದಾನೆ. ಈ ಮೂಲಕ ಸೊಸೆಯನ್ನು ಪತ್ನಿ ಎಂದು ಸ್ವೀಕರಿಸಿದ್ದಾನೆ ಮಾವ. ಇದೀಗ ಇವರ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆಗೊಳಗಾಗಿದೆ.
ಇದೀಗ ಇಬ್ಬರೂ ಜೊತೆಯಾಗಿ ವಾಸಿಸುತ್ತಿದ್ದಾರೆ. ಕೈಲಾಶ್ ಗ್ರಾಮದಲ್ಲಿ ಯಾರಿಗೂ ತಿಳಿಸದೆ ಸದ್ದಿಲ್ಲದೆ ಸೊಸೆ ಪೂಜಾಳನ್ನು ಮದುವೆಯಾಗಿದ್ದಾನೆ. ಮದುವೆಯ ಫೋಟೋ ವೈರಲ್ ಆದ ನಂತರವೇ ಜನರಿಗೆ ಈ ಮದುವೆ ವಿಷಯ ತಿಳಿದಿದೆ. ಈ ಮದುವೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸೊಸೆಯನ್ನೇ ಮಾವ ಮದುವೆ ಆಗುವುದೆಂದರೆ ಹೇಗೆ? ಎಲ್ಲಿದೆ ಸಂಬಂಧಗಳಿಗೆ ಬೆಲೆ? ಪಾಶ್ಚಿಮಾತ್ಯ ಸಂಸ್ಕೃತಿಗೆ ಬೀಳುತ್ತಿದ್ದೇವೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.