ಮನೆಗೆ ಬಂದ ಅಳಿಯನಿಗೆ ಬರೋಬ್ಬರಿ 379 ಬಗೆಯ ಆಹಾರ ಪದಾರ್ಥಗಳನ್ನು ಬಡಿಸಿ ಭರ್ಜರಿ ಆತಿಥ್ಯ
Friday, January 20, 2023
ಅಮರಾವತಿ: ಅಳಿಯನೊಬ್ಬ ಮನೆಗೆ ಬಂದರೆ ಸಾಮಾನ್ಯ ಸಂಭ್ರಮ ಮನೆ ಮಾಡುತ್ತದೆ. ವಿವಿಧ ಬಗೆಯ ಉಣಿಸು - ತಿನಿಸುಗಳನ್ನು ಮಾಡಿ ಬಡಿಸಲಾಗುತ್ತದೆ. ಆದರೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಕುಟುಂಬವೊಂದು ಮನೆಗೆ ಬಂದ ಅಳಿಯನಿಗೆ ಭರ್ಜರಿ ಔತಣದೊಂದಿಗೆ ಸತ್ಕರಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಕರ ಸಂಕ್ರಾಂತಿಗೆಂದು ಮನೆಗೆ ಬಂದಿರುವ ಅಳಿಯನಿಗೆ 379 ವಿವಿಧ ಆಹಾರ ಪದಾರ್ಥಗಳನ್ನು ಒಳಗೊಂಡ ಭರ್ಜರಿ ಔತಣದೊಂದಿಗೆ ಅಳಿಯನನ್ನು ಕುಟುಂಬ ಸತ್ಕರಿಸಿದೆ. ಮನೆ ಅಳಿಯನಿಗೆ ಕುಟುಂಬದ ಸದಸ್ಯರು ಬಡಿಸಿರುವ ಆಹಾರ ಪದಾರ್ಥಗಳ ಸಂಖ್ಯೆ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಈ ಕುರಿತ ವೀಡಿಯೊಗಳು ಹಾಗೂ ಚಿತ್ರಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ.
30 ಬಗೆಯ ಕರಿಗಳು, ಅನ್ನ, ಪುಳಿಹೊರ, ಬಿರಿಯಾನಿ, ಸಾಂಪ್ರದಾಯಿಕ ಗೋದಾವರಿ ಸಿಹಿತಿಂಡಿಗಳು, ಬಿಸಿ ಮತ್ತು ತಂಪು ಪಾನೀಯಗಳು, ಬಿಸ್ಕತ್ತುಗಳು, ಹಣ್ಣುಗಳು, ಕೇಕ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಂಕ್ರಾಂತಿಯಂದು ತಮ್ಮ ಅಳಿಯನಿಗೆ ಆತಿಥ್ಯ ನೀಡುವುದು ಕಳೆದ ಹಲವು ವರ್ಷಗಳಿಂದ ಆಂಧ್ರದಲ್ಲಿ, ವಿಶೇಷವಾಗಿ ಗೋದಾವರಿ ಜಿಲ್ಲೆಯ ಮನೆಗಳಲ್ಲಿ ಕಂಡುಬರುತ್ತಿರುವ ಸಂಪ್ರದಾಯವಾಗಿದೆ.
ಕಳೆದ ವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಕುಟುಂಬವೊಂದು ತಮ್ಮ ಅಳಿಯನಿಗೆ ಇದೇ ರೀತಿಯ ಸ್ವಾಗತವನ್ನು ನೀಡಿತ್ತು. ಈ ವೇಳೆ ಅವಿಭಜಿತ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಕುಟುಂಬವು ತನ್ನ ಅಳಿಯನಿಗೆ 365 ವಿವಿಧ ರೀತಿಯ ಆಹಾರ ಪದಾರ್ಥವನ್ನು ಬಡಿಸಿತ್ತು.