ಮಂಗಳೂರು: ಕೊಲ್ಯ - ಅಡ್ಕದಲ್ಲಿ ಭೀಕರ ಅಪಘಾತಕ್ಕೆ ಓರ್ವ ಬಲಿ; ಇಬ್ಬರು ಯುವತಿಯರು ಸೇರಿದಂತೆ ಯುವಕ ಗಂಭೀರ ಗಾಯ
Monday, January 30, 2023
ಮಂಗಳೂರು: ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಭವಿಸಿರುವ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಯುವತಿಯರ ಸಹಿತ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ರಾ.ಹೆ. 66 ರ ಕೊಲ್ಯ- ಅಡ್ಕ ಬಳಿ ನಡೆದಿದೆ.
ಈ ಘಟನೆಯಲ್ಲಿ ಉಪ್ಪಳ ಹಿದಾಯತ್ ನಗರ ನಿವಾಸಿ ಬಷಾರ ಅಹಮ್ಮದ್ (22) ಮೃತಪಟ್ಟಿದ್ದಾರೆ. ಕೇರಳ ಕಣ್ಣೂರು ನಿವಾಸಿ ಫಾತಿಮಾ ಹಾಗೂ ರೇವತಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಇನ್ನೋರ್ವ ಗಾಯಾಳುವಿನ ಗುರುತು ಪತ್ತೆಯಾಗಿಲ್ಲ.
ಘಟನೆ ನಡೆದು ಬಹಳಷ್ಟು ಸಮಯವಾದರೂ ಸ್ಥಳಕ್ಕೆ ಪೊಲೀಸರು ಹಾಗೂ ಟೋಲ್ ಗೇಟ್ ಅಂಬ್ಯುಲೆನ್ಸ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣಕ್ಕೆ ಆ್ಯಂಬ್ಯುಲೆನ್ಸ್ ಬಾರದಿರುವ ಹಿನ್ನೆಲೆಯಲ್ಲಿ ಕಾರಿನಲ್ಲೇ ಗಾಯಾಳುಗಳನ್ನು ಸಾಗಿಸಲಾಯಿತು.
ನಾಲ್ವರಿದ್ದ ಕಾರು ಕೊಲ್ಯ- ಅಡ್ಕ ಬಳಿ ರಸ್ತೆ ವಿಭಜಕವನ್ನು ಏರಿ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ಬಷಾರ ಅಹಮ್ಮದ್ ಅದರೊಳಕ್ಕೆ ಸಿಲುಕಿ, ತಲೆ ಸೇರಿದಂತೆ ದೇಹಕ್ಕೆ ಸಂಪೂರ್ಣ ಗಾಯಗೊಂಡು ಒಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ . ಇನ್ನುಳಿದ ಮೂವರನ್ನು ಸ್ಥಳೀಯರು ಸೇರಿ ಕಾರಿನಿಂದ ಹಲವು ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಓರ್ವ ಯುವತಿಯನ್ನು ಪ್ರಶಾಂತ್ ಗಟ್ಟಿ ಎಂಬವರು ಕಾರಿನಲ್ಲಿ ಎ.ಜೆ ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದರೆ, ಮತ್ತೋರ್ವಳನ್ನು ಟಿಟಿ ಮೂಲಕ ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಾಳುವನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಫಾತಿಮಾ ಎಂಬಾಕೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿಯಾಗಿದ್ದಾರೆ. ನಾಲ್ವರು ಗೆಳೆಯರಾಗಿದ್ದರೆಂದು ತಿಳಿದುಬಂದಿದೆ.