ಬೆಳ್ತಂಗಡಿ: ಮುಗುಚಿಬಿದ್ದ ಆಟೊರಿಕ್ಷಾ; ಒಂದು ವರ್ಷದ ಮಗು ಬಲಿ
Tuesday, January 31, 2023
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ಸೇತುವೆಗೆ ಢಿಕ್ಕಿಯಾಗಿ ಮಗುಚಿಬಿದ್ದ ಪರಿಣಾಮ ಒಂದು ವರ್ಷದ ಮಗು ಮೃತಪಟ್ಟ ಹೃದಯವಿದ್ರಾವಕಾರಿ ಘಟನೆ ಮಾಲಾಡಿ ಎಂಬಲ್ಲಿ ಸಂಭವಿಸಿದೆ.
ಕಾರ್ಕಳದ ನಿಟ್ಟೆ ನಿವಾಸಿ ಸಂತೋಷ್ ಹಾಗೂ ಗೀತಾ ದಂಪತಿಯ ಒಂದು ವರ್ಷದ ಮಗು ಅಪಘಾತದಲ್ಲಿ ಮೃತಪಟ್ಟಿದೆ.
ಗೀತಾ ತಮ್ಮ ಮಗು ಹಾಗೂ ಕುಟುಂಬದವರೊಂದಿಗೆ ಸಂಬಂಧಿಕರ ಮನೆಗೆ ಆಟೊರಿಕ್ಷಾದಲ್ಲಿ ಸಂಚರಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಚಾಲಕನ ನಿಯಂತ್ರಣ ತಪ್ಪಿದ ಆಟೊರಿಕ್ಷಾ ಸೇತುವೆಯೊಂದಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಅಪಘಾತದ ತೀವ್ರತೆಗೆ ಮಗು ತಾಯಿ ಗೀತಾ ಕೈಯಿಂದ ರಸ್ತೆಗೆ ಎಸೆಯಲ್ಪಟ್ಟಿದೆ. ಅಪಘಾತದಲ್ಲಿ ಗೀತಾ ಹಾಗೂ ರತ್ನ ಎಂಬವರಿಗೂ ಸಣ್ಣ ಪುಟ್ಟ ಗಾಯಗಳಾಗಿತ್ತು.
ತಕ್ಷಣ ಸ್ಥಳೀಯರ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಗಂಭೀರವಾಗಿ ಗಾಯಗೊಂಡ ಮಗು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದೆ ಎನ್ನಲಾಗಿದೆ. ಘಟನೆಯ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.