ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು: ಇಂಡಕ್ಷನ್ ಪ್ರೋಗ್ರಾಂ
ಮೂಡುಬಿದಿರೆ: ಯೋಗದಿಂದ ಸಧೃಡ ಆರೋಗ್ಯ ಸಾಧ್ಯ. ಯೋಗ ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರಲು ಸಹಕಾರಿ ಎಂದು ಬೆಂಗಳೂರಿನ ಎಸ್ ವ್ಯಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಮಂಜುನಾಥ ಎನ್ ಕೆ ಹೇಳಿದರು.
ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ- ಪದವಿ ಹಾಗೂ ಸ್ನಾತಕೋತ್ತರ ಪದವಿಯ ಕ್ರಮವಾಗಿ 20 ಹಾಗೂ 9ನೇ ಬ್ಯಾಚ್‌ನ ವಿದ್ಯಾರ್ಥಿಗಳ ಇಂಡಕ್ಷನ್ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನ್ಯಾಚ್ಯುರೋಪತಿ ವೈದ್ಯ ಪದ್ದತಿಯು ಪ್ರಕೃತಿಯಲ್ಲಿನ ಹಲವು ಚಿಕಿತ್ಸಾ ಕ್ರಮಗಳ ಕುರಿತು ತಿಳಿಸುವುದರ ಜೊತೆಗೆ ಅನೇಕ ಒಳ್ಳೆಯ ಅಭ್ಯಾಸ ಅನುಸರಿಸಲು ಎಡೆಮಾಡಿಕೊಡುತ್ತದೆ. ಪ್ರತಿದಿನ ಯೋಗ ಮಾಡುವುದರಿಂದ ಅನೇಕ ಲಾಭವಿದ್ದು ಜೀವನಕ್ಕೆ ನವ ಚೈತನ್ಯ ಲಭಿಸುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ನಮ್ಮ ಆರೋಗ್ಯದ ಕಾಳಜಿ ನಮ್ಮ ಕೈಯಲ್ಲಿದೆ. ವ್ಯಕ್ತಿಯ ದೇಹ ಸಂರಚನೆಯು ಪ್ರಕೃತಿಯ ಅನುಸಾರವಾಗಿದ್ದು, ಉತ್ತಮ ಅಭ್ಯಾಸ ರೂಢಿ ಮಾಡಿಕೊಂಡಾಗ ಆರೋಗ್ಯಕರ ಜೀವನ ಸುಲಭ ಸಾಧ್ಯ. ದಿನಂಪ್ರತಿ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲೆ ಡಾ ವನಿತಾ ಎಸ್ ಶೆಟ್ಟಿ, ಆಳ್ವಾಸ್ ಫಾರ್ಮಸಿಯ ವ್ಯವಸ್ಥಾಪಕ ನಿರ್ದೇಶಕಿ ಡಾ ಗ್ರೀಷ್ಮ ವಿವೇಕ್ ಆಳ್ವ ಹಾಗೂ ಉಪನ್ಯಾಸಕರುಗಳು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕರ‍್ಯಕ್ರಮದ ಮುಖ್ಯ ಅತಿಥಿ ಡಾ ಮಂಜುನಾಥ ಎನ್‌ರವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ಮೇಘನಾ ನಾಯ್ಕ ನಿರೂಪಿಸಿ, ಉಪನ್ಯಾಸಕಿ ಡಾ ಜ್ಯೋತಿ ಕೆ ವಿ ವಂದಿಸಿದರು.