ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಅರೆಸ್ಟ್
ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆರೋಪಿ ಶಂಕರ್ ಮಿಶ್ರ ಎಂಬಾತನನ್ನು ನವದೆಹಲಿ ಪೊಲೀಸರು ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬಂಧಿಸಿದ್ದಾರೆ.
ಈ ನಡುವೆ ಆತ ಮಹಿಳೆಗೆ ಪರಿಹಾರವಾಗಿ 15 ಸಾವಿರ ರೂ. ನೀಡಿದ್ದು, ಅದನ್ನು ತಿರಸ್ಕರಿಸಲಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ. ವಕೀಲ ಮಿಶ್ರಾ 2022ರ ನವೆಂಬರ್ 26 ರಂದು ನ್ಯೂಯಾರ್ಕ್ ನಿಂದ ದೆಹಲಿಗೆ ಬರುತ್ತಿದ್ದ ವೇಳೆ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ತನ್ನ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಅಲ್ಲದೆ ತನ್ನ ಖಾಸಗಿ ಅಂಗವನ್ನು ಆಕೆಯ ಮುಂದೆ ಪ್ರದರ್ಶನ ಮಾಡಿ ಮುಜುಗರ ಉಂಟು ಮಾಡಿದ್ದರು. ಪರಿಣಾಮ ನೊಂದ ಮಹಿಳೆ ಏರ್ ಇಂಡಿಯಾದ ಆಡಳಿತ ಮಂಡಳಿಗೆ ದೂರು ನೀಡಿದ್ದರು. ತಕ್ಷಣ ಏರ್ ಇಂಡಿಯಾ ಆಡಳಿತ ಮಂಡಳಿ ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ದೆಹಲಿಯಿಂದ ಪಲಾಯನ ಮಾಡಿ ಬೆಂಗಳೂರಿಗೆ ಬಂದು ನೆಲೆಸಿದ್ದ. ಆದ್ದರಿಂದ ಆತ ವಿದೇಶಕ್ಕೆ ಪಲಾಯನ ಮಾಡದಂತೆ ಪೊಲೀಸರು ಲುಕ್ಔಟ್ ನೊಟೀಸ್ ಜಾರಿ ಮಾಡಿದ್ದರು. ಆರೋಪಿ ಶಂಕರ್ ಮಿಶ್ರನ ಕೊನೆಯ ಮೊಬೈಲ್ ಲೊಕೇಶನ್ ಆಧಾರದ ತನಿಖೆ ಆರಂಭಿಸಿದ್ದ ದೆಹಲಿ ಪೊಲೀಸರು ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದಿಳಿದ್ದರು. ಬೆಂಗಳೂರಿನ ಮಾರತ್ ಹಳ್ಳಿಯಲ್ಲಿರುವ ಆರೋಪಿಯ ಕಚೇರಿ, ಮನೆಗಳಲ್ಲಿ ಶೋಧ ನಡೆಸಿದ ತಡರಾತ್ರಿ ಸಂಜಯನಗರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಹಾಗೂ ಮಹಿಳೆಯ ನಡುವಿನ ವಾಟ್ಸ್ಆ್ಯಪ್ ಸಂದೇಶಗಳು ಪ್ರಕರಣ ನಡೆದಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಶಂಕರ್ ಮಿಶ್ರ ಕ್ಯಾಲಿಫೋರ್ನಿಯಾ ಮೂಲದ ವೆಲ್ಸ್ ಫಾರ್ಗೊ ಎಂಬ ಅಮೆರಿಕನ್ ಮಲ್ಟಿನ್ಯಾಷನಲ್ ಕಂಪೆನಿಯ ಭಾರತ ವಿಭಾಗದ ಉಪಾಧ್ಯಕ್ಷನಾಗಿದ್ದ. ಮೂತ್ರ ವಿಸರ್ಜನೆಯ ಪ್ರಕರಣದಿಂದ ಇದೀಗ ಈ ಕಂಪೆನಿಯೂ ಆತನನ್ನು ಹುದ್ದೆಯಿಂದ ಕಿತ್ತು ಹಾಕಿದೆ.