![ಪುತ್ತೂರು: ಮನೆಗೆ ನುಗ್ಗಿ ಮಾಜಿ ಪ್ರೇಯಸಿಯನ್ನು ಚೂರಿಯಿಂದ ಇರಿದು ಹತ್ಯೆಗೈದ ಭಗ್ನ ಪ್ರೇಮಿ ಅರೆಸ್ಟ್ ಪುತ್ತೂರು: ಮನೆಗೆ ನುಗ್ಗಿ ಮಾಜಿ ಪ್ರೇಯಸಿಯನ್ನು ಚೂರಿಯಿಂದ ಇರಿದು ಹತ್ಯೆಗೈದ ಭಗ್ನ ಪ್ರೇಮಿ ಅರೆಸ್ಟ್](https://blogger.googleusercontent.com/img/b/R29vZ2xl/AVvXsEjfCAxGQXkzR97bRErPaj8LNrMvAl56bOiZfLXJzMoowtiYh4rCTCLQ4SctcAG4RAUCmwPGV6aNVBK5U-wRLHci0IsX_r6lZij6ofTOrZzUjiev87JDxC0UG_zHrZ_6ng1LnTipYv78gGi8/s1600/1674033504168985-0.png)
ಪುತ್ತೂರು: ಮನೆಗೆ ನುಗ್ಗಿ ಮಾಜಿ ಪ್ರೇಯಸಿಯನ್ನು ಚೂರಿಯಿಂದ ಇರಿದು ಹತ್ಯೆಗೈದ ಭಗ್ನ ಪ್ರೇಮಿ ಅರೆಸ್ಟ್
Wednesday, January 18, 2023
ಪುತ್ತೂರು: ನಗರದ ಮುಂಡೂರು ಗ್ರಾಮದಲ್ಲಿ ಹಾಡಹಗಲೇ ಯುವತಿಯನ್ನು ಆಕೆಯ ಮನೆಗೆ ನುಗ್ಗಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಯುವಕನನ್ನು ಪೊಲೀಸರು ಬಂಧಿಸಿ, ಕೊಲೆಗೆ ಬಳಸಿರುವ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.
ಸುಳ್ಯದ ಕನಕಮಜಲು ನಿವಾಸಿ ಉಮೇಶ್ ಬಂಧಿತ ಆರೋಪಿ. ಕಂಪ ನಿವಾಸಿ ಜಯಶ್ರೀ ಕೊಲೆಯಾದ ಯುವತಿ.
ಜಯಶ್ರೀಯನ್ನು ಕನಕಮಜಲಿನ ಉಮೇಶ್ ಕೆಲವು ಕಾಲಗಳಿಂದ ಪ್ರೀತಿಮಾಡುತ್ತಿದ್ದ. ಆತ ಆಗಾಗ್ಗೆ ಆಕೆಯ ಮನೆಗೂ ಬರುತ್ತಿದ್ದ. ಆದರೆ ಆತನ ನಡವಳಿಕೆ ಸರಿ ಬಾರದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ ನಿಂದ ಆಕೆಯನ್ನು ದೂರ ಮಾಡಿದ್ದಳು.
ಇದರಿಂದ ಅಸಮಾಧಾನದಿಂದಿದ್ದ ಆತ ಜ.17ರಂದು ಮಧ್ಯಾಹ್ನ 11.30ರ ವೇಳೆಗೆ ಜಯಶ್ರೀ ಮನೆಯಲ್ಲಿ ಒಬ್ಬಳೇ ಇದ್ದ ವೇಳೆ ನುಗ್ಗಿರುವ ಉಮೇಶ್ ಆಕೆಯ ಹೊಟ್ಟೆಗೆ ಮನಸೋ ಇಚ್ಛೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಚೂರಿಯನ್ನು ಆಕೆಯ ಹೊಟ್ಟೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಜಯಶ್ರೀ ಚೀರಾಟ ಕೇಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಓಡಿ ಬಂದಾಗ ಆಕೆ ರಕ್ತದ ಮಡುವಲ್ಲಿ ಬಿದ್ದಿದ್ದಳು.
ತೀವ್ರ ರಕ್ತಸ್ರಾವವಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಆಕೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೂರಿಯಿಂದ ಇರಿದವನು ಯುವಕ ಎಂದಷ್ಟೇ ಮಾಹಿತಿ ಲಭಿಸಿದೆ. ಪೊಲೀಸರು ತನಿಖೆ ನಡೆಸಿದಾಗ ಉಮೇಶ್ ನೇ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸಿ ಕೃತ್ಯ ಎಸಗಲು ಬಳಸಿರುವ ಮಾರಕಾಯುಧ ಹಾಗೂ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.