![ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ](https://blogger.googleusercontent.com/img/b/R29vZ2xl/AVvXsEjxYOLgY7gFScmCTzSGZRvaYUMhTY_zu2WA1ltO2Nw3tBUSfBchZuzSBjQA-M4qr38Uj0VRtVpYuGiKpe8zmm_zP4ZhkwqVjpz1id2ILsdsQWevj2Rm9hhrEDS9rZwHnN-JnPRqAAc0MIhZ/s1600/1675168197484841-0.png)
ಶಿಷ್ಯೆ ಮೇಲೆ ಅತ್ಯಾಚಾರ ಎಸಗಿದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
Tuesday, January 31, 2023
ಗಾಂಧಿನಗರ: 2013ರಲ್ಲಿ ದಾಖಲಾಗಿದ್ದ ಮಹಿಳಾ ಭಕ್ತೆಯೊಬ್ಬರ ಮೇಲೆ ನಡೆಸಿರುವ ಅತ್ಯಾಚಾರ ಪ್ರಕರಣವೊಂದರಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಗುಜರಾತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2001 - 2006ರಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ದೋಷಿ ಎಂದು ಗುಜರಾತ್ ಸೆಷನ್ಸ್ ನ್ಯಾಯಾಲಯ ಡಿ.ಕೆ.ಸೋನಿ ತೀರ್ಪು ನೀಡಿದ್ದಾರೆ. ಅಹಮದಾಬಾದ್‌ನ ಮೊಟೆರಾದಲ್ಲಿರುವ ಅಸಾರಾಂ ಬಾಪು ಆಶ್ರಮದಲ್ಲಿದ್ದಾಗ ಸೂರತ್ ಮೂಲದ ಮಹಿಳೆಯೊಬ್ಬರು ಸ್ವಯಂಘೋಷಿತ ದೇವಮಾನವ ತಮ್ಮ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಅಸಾರಾಂ ಪುತ್ರ ನಾರಾಯಣ ಸಾಯಿ, ಪತ್ನಿ ಲಕ್ಷ್ಮೀ, ಪುತ್ರಿ ಭಾರತಿ ಮತ್ತು ನಾಲ್ವರು ಮಹಿಳಾ ಅನುಯಾಯಿಗಳಾದ ಧ್ರುವಬೆನ್, ನಿರ್ಮಲಾ, ಜಸ್ಸಿ ಮತ್ತು ಮೀರಾ ಕೂಡ ಆರೋಪಿಗಳಾಗಿದ್ದಾರೆ.
ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಸಾರಾಂ ಬಾಪು ಪತ್ನಿ ಸೇರಿದಂತೆ ಇತರ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಹಮದಾಬಾದ್‌ನ ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನ ಪ್ರಕಾರ, ಅಸಾರಾಂ ಬಾಪು 2001 ರಿಂದ 2006 ರವರೆಗೆ ನಗರದ ಹೊರವಲಯದಲ್ಲಿರುವ ತನ್ನ ಆಶ್ರಮದಲ್ಲಿ ಮಹಿಳೆಯ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದನು ಎಂದು ಆರೋಪಿಸಲಾಗಿತ್ತು.
ನ್ಯಾಯಾಲಯವು ವಿಚಾರಣೆ ನಡೆಸಿ ಅಸಾರಾಂನನ್ನು ದೋಷಿ ಎಂದು ತೀರ್ಪು ನೀಡಿದೆ. ಆದರೆ ಆತ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೋಧಪುರದ ಜೈಲಿನಲ್ಲಿದ್ದಾನೆ. 2018 ರಲ್ಲಿ, ಜೋಧಪುರದ ವಿಚಾರಣಾ ನ್ಯಾಯಾಲಯವು ಪ್ರತ್ಯೇಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಸಾರಾಂನನ್ನು ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿತ್ತು. 2013ರಲ್ಲಿ ಜೋಧಪುರದ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಸಾರಾಂ ಬಾಪು ತಪ್ಪಿತಸ್ಥನೆಂದು ಸಾಬೀತಾಗಿದೆ.