
ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
ಬಂಟ್ವಾಳ: ಕಾಯಿ ಕೀಳಲೆಂದು ತೆಂಗಿನಮರ ಹತ್ತಿರುವ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ನಾವೂರ ಎಂಬಲ್ಲಿ ಡಿ.31 ರಂದು ನಡೆದಿದೆ.
ಸುರೇಶ್ ಎಂಬವರು ಮೃತಪಟ್ಟ ವ್ಯಕ್ತಿ.
ಸುರೇಶ್ ಅವರು ಹಲವಾರು ವರ್ಷಗಳಿಂದ ಮರ ಹತ್ತಿ ತೆಂಗಿನಕಾಯಿ, ಅಡಿಕೆ ಕಾಯಿ ಕೀಳುವ ಕೂಲಿ ವೃತ್ತಿ ಮಾಡುತ್ತಿದ್ದರು. ಎಂದಿನಂತೆ ತೆಂಗಿನಕಾಯಿ ಕೀಳಲೆಂದು ಕೂಲಿಗಾಗಿ ನಾವೂರು ಎಂಬಲ್ಲಿ ಮನೆಯೊಂದಕ್ಕೆ ಹೋಗಿದ್ದರು. ತೋಟದಲ್ಲಿ ತೆಂಗಿನಕಾಯಿ ಕೀಳುವ ವೇಳೆ ಅವರು ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದಿದ್ದಾರೆ.
ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಬಂಟ್ವಾಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಪರೀಕ್ಷಿಸಿ ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಹೋಗಲು ಸೂಚಿಸಿದರು.
ಆದರೆ ಮಂಗಳೂರಿಗೆ ಕರೆದೊಯ್ಯು ವೇಳೆ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಪರೀಕ್ಷೆ ನಡೆಸಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.