ನಾಯಿಯ ಭಯದಿಂದ ಮೂರನೇ ಮಹಡಿಯಿಂದ ಹಾರಿ ಸ್ವಿಗ್ಗಿ ಡೆಲಿವರಿ ಬಾಯ್ ಪ್ರಾಣ ಕಳೆದುಕೊಂಡ
Monday, January 16, 2023
ಹೈದರಾಬಾದ್: ನಾಯಿ ಬೆನ್ನಟ್ಟಿದ ಪರಿಣಾಮ ಜೀವಭಯದಿಂದ ತಪ್ಪಿಸಿಕೊಳ್ಳಲೆತ್ನಿಸಿ ಮೂರನೇ ಮಹಡಿಯಿಂದ ಜಿಗಿದ ಸ್ವಿಗ್ಗಿ ಡೆಲಿವರಿ ಬಾಯ್ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾನೆ.
ಹೈದರಾಬಾದ್‌ನ ಬಂಜಾರಾ ಹಿಲ್ಸ್ ಬಳಿಯ ಅಪಾರ್ಟ್‌ಮೆಂಟ್ ವೊಂದರಲ್ಲಿ ಫುಡ್ ಡೆಲಿವರಿ ಮಾಡಲು ರಿಜ್ವಾನ್ ಎಂಬಾತ ಬುಧವಾರ ರಾತ್ರಿ ಈ ಅವಘಡ ಸಂಭವಿಸಿತ್ತು. ಫುಡ್ ಡೆಲಿವರಿ ಮಾಡಲು ಅಪಾರ್ಟ್‌ಮೆಂಟ್‌ಗೆ ಹೋಗಿದ್ದ ವೇಳೆ ರಿಜ್ವಾನ್ ಅಲ್ಲಿದ್ದ ಸಾಕುನಾಯಿಯೊಂದರ ಬೊಗಳುವಿಕೆಗೆ ಬೆದರಿ ಓಟಕ್ಕಿತ್ತಿದ್ದಾನೆ. ಕೊನೆಗೆ ಅದರ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಇಂದು ಮೃತಪಟ್ಟಿದ್ದಾನೆ.
ಶೋಭನಾ ಎಂಬವರಿಗೆ ಸೇರಿದ್ದ ಜರ್ಮನ್ ಶೆಫರ್ಡ್ ನಾಯಿಯ ದಾಳಿಯಿಂದ ತಪ್ಪಿಸಿಕೊಳ್ಳಲು ರಿಜ್ವಾನ್‌ಗೆ ಮೂರನೇ ಮಹಡಿಯಿಂದ ಹಾರಿದ್ದಾನೆ. ಈ ವೇಳೆ ಶೋಭನಾ ಮತ್ತು ಅಪಾರ್ಟ್‌ಮೆಂಟ್‌ನಲ್ಲಿದ್ದ ಇತರರು ಕೂಡಲೇ ರಕ್ಷಣೆಗೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ರಿಜ್ವಾನ್ ಸಹೋದರನ ದೂರಿನ ಮೇರೆಗೆ ಪೊಲೀಸರು ಶೋಭನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.