ಮಂಗಳೂರು: ಗಾಂಜಾ ದಂಧೆ ಪ್ರಕರಣದಲ್ಲಿ ಅಗೆದಷ್ಟು ಹೊರ ಬರುತ್ತಿದೆ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರ
Thursday, January 12, 2023
ಮಂಗಳೂರು: ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಭಾರೀ ಡ್ರಗ್ಸ್ ಜಾಲವೊಂದು ಬಯಲಿಗೆ ಬಂದಿತ್ತು. ಈ ಮೂಲಕ ವೈದ್ಯರು ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳು 10 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಜಾಲದ ಬೆನ್ನು ಹತ್ತಿದ ಪೊಲೀಸರು ಮತ್ತೆ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಕಸಬಾ ಬೆಂಗ್ರೆ ನಿವಾಸಿ, ಹಣ್ಣಿನಂಗಡಿಯಲ್ಲಿ ವೃತ್ತಿ ನಿರ್ವಹಿಸುತ್ತಿರುವ ಮೊಹಮ್ಮದ್ ಅಫ್ರಾರ್(23), ಮೂಲತಃ ಕೇರಳದ ಕೊಚ್ಚಿನ್ ನಿವಾಸಿ, ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಫಾರ್ಮಾ ಡಿ ಫೈನಲ್ ಈಯರ್ ವಿದ್ಯಾರ್ಥಿ ಅಡಾನ್ ದೇವ್, ಮೂಲತಃ ತುಮಕೂರು ನಿವಾಸಿ, ಮಂಗಳೂರಿನ ಕಾಲೇಜೊಂದರಲ್ಲಿ ಪೆಥಾಲಾಜಿ ಎಂಡಿ ಫೈನಲ್ ಈಯರ್ ವಿದ್ಯಾರ್ಥಿ ಹರ್ಷ ಕುಮಾರ್ ಬಂಧಿತರು.
ಮೂಲತಃ ಇಂಗ್ಲೆಂಡ್ ಪ್ರಜೆ ಕಿಶೋರಿಲಾಲ್ ರಾಮ್ ಜಿ ನೀಲ್ ಡ್ರಗ್ಸ್ ಜಾಲದ ಕಿಂಗ್ ಪಿನ್. ಈತ ಎನ್‌ಆರ್ ಐ ಕೋಟಾದಲ್ಲಿ ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಡೆಂಟಲ್ ಓದುತ್ತಿದ್ದ. ಈತನನ್ನು 5 ದಿನಗಳ ಹಿಂದೆ ಬಂಟ್ಸ್ ಹಾಸ್ಟೆಲ್ ಬಳಿಯ ಅಪಾರ್ಟೆಂಟ್ ನಲ್ಲಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಈ ಡ್ರಗ್ ಪೆಡ್ಲರ್ ನೀಡಿರುವ ಮಾಹಿತಿಯನ್ವಯ ಮಂಗಳವಾರ ಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರಿನ ಎರಡು ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರನ್ನು ಬಂಧಿಸಿದ್ದರು. ಇದೀಗ ಮತ್ತೆ ಮೂವರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.