ಮೇಲಿನ ಮನೆ ಎರಡು ಮಕ್ಕಳ ತಂದೆ, ಕೆಳಗಿನ ಮನೆಯ ಎರಡು ಮಕ್ಕಳ ತಾಯಿಯೊಂದಿಗೆ ಪರಾರಿ: ಹುಡುಕಿಕೊಡುವಂತೆ ಇಬ್ಬರ ಪತಿ - ಪತ್ನಿಯಿಂದಲೂ ದೂರು ದಾಖಲು
ಬೆಂಗಳೂರು: ಒಂದೇ ಕಟ್ಟಡದ ಕೆಳಮನೆಯ ವಿವಾಹಿತ ಯುವತಿ ಹಾಗೂ ಮೇಲಿನ ಮನೆಯ ಎರಡು ಮಕ್ಕಳ ತಂದೆ ಪರಾರಿಯಾಗಿರುವ ವಿಚಿತ್ರ ಲವ್ ಸ್ಟೋರಿ ಜ್ಞಾನಭಾರತೀ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರುತಿ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೆಳ ಮಹಡಿಯಲ್ಲಿ ವಾಸವಿದ್ದ ಶಾಜಿಯಾ (22) ಮೇಲ್ಮನೆಯಲ್ಲಿದ್ದ ಮೊಹಮ್ಮದ್ ನವೀದ್ (37) ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಜ್ಞಾನಭಾರತೀ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಅಹಮ್ಮದ್ ನವೀದ್ 12 ವರ್ಷಗಳ ಹಿಂದೆ ಝೀನತ್ ಎಂಬಾಕೆಯನ್ನು ವಿವಾಹವಾಗಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನವೀದ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಇಬ್ಬರೂ ಚೆನ್ನಾಗಿಯೇ ಇದ್ದರು. ಆದರೆ ಡಿ.9ರಂದು 6 ಗಂಟೆಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಕಾರಿನಲ್ಲಿ ಮನೆಯಿಂದ ಹೊರಟ ನವೀದ್ ಇದುವರೆಗೂ ವಾಪಸ್ ಬಂದಿಲ್ಲ. ಕುಟುಂಬಸ್ಥರು, ಸ್ನೇಹಿತರಲ್ಲಿ ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ. ಅಲ್ಲದೆ ಕೆಳಗಿನ ಮನೆಯ ಶಾಜಿಯಾ ಕೂಡಾ ನಾಪತ್ತೆ ಆಗಿರುವುದರಿಂದ ಇಬ್ಬರೂ ಜತೆಗೆ ಹೋಗಿರುವ ಸಂಶಯ ವ್ಯಕ್ತವಾಗಿದೆ ಎಂದು ನವೀದ್ ಪತಿ ಝೀನತ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಶಾಜಿಯಾ ಹಾಗೂ ಮುಬಾರಕ್ (28) ದಂಪತಿಗೆ ಇಬ್ಬರು ಮಕ್ಕಳಿದ್ದರು. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಮುಬಾರಕ್ ಗೃಹಿಣಿ ಪತ್ನಿ ಶಾಜಿಯಾರೊಂದಿಗೆ ಅನ್ಯೋನ್ಯವಾಗಿ ವಾಸಿಸುತ್ತಿದ್ದರು. ಡಿ.9ರಂದು ಬೆಳಗ್ಗೆ 9.30ಕ್ಕೆ ಪುತ್ರಿ ಐಶಾಳನ್ನು ಶಾಲೆಗೆ ಬಿಡಲು ಹೋಗುತ್ತಿರುವುದಾಗಿ ಹೇಳಿ ಹೋದವಳು ಈವರೆಗೆ ಬಂದಿಲ್ಲ. ಅಲ್ಲದೆ ಎರಡುವರೆ ವರ್ಷದ ಪುತ್ರಿ ಜ್ಯೂಹಾಳನ್ನು ತನ್ನೊಂದಿಗೆ ಕರೆದೊಯ್ದಿದ್ದಾಳೆ ಎಂದು ಮುಬಾರಕ್ ಪೊಲೀಸ್ ದೂರು ನೀಡಿದ್ದಾರೆ.
2022ರ ಡಿ.9ರಂದು ಈ ಘಟನೆ ನಡೆದಿದ್ದು, ತಿಂಗಳಾದರೂ ಇಬ್ಬರ ಬಗ್ಗೆ ಸುಳಿವು ಪತ್ತೆಯಿಲ್ಲ. ಪೊಲೀಸರು ಸತತವಾಗಿ ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಿದ್ದರೂ, ನವೀದ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪತ್ತೆ ಮಾಡುವುದು ಪೊಲೀಸರಿಗೂ ಸವಾಲಾಗಿದೆ. ಇದೀಗ ತಮ್ಮ ಪತಿ-ಪತ್ನಿಯರನ್ನು ಹುಡುಕಿಕೊಡುವಂತೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿಗೂ ದೂರುದಾರರು ಮನವಿ ಮಾಡಿದ್ದಾರೆ.