ಗಾಂಜಾ ಕೇಸು ದಾಖಲು ಮಾಡುವುದಾಗಿ ಹಣ ಕಿತ್ತುಕೊಂಡ ಪೊಲೀಸರು?: ಪೊಲೀಸ್ ಆಯುಕ್ತರಿಗೆ ಟ್ವೀಟ್ ಮೂಲಕ ದೂರು ನೀಡಿದ ಯುವಕ
Friday, January 13, 2023
ಬೆಂಗಳೂರು: ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರನ್ನು ರಾತ್ರಿಪಾಳಿ ಪೊಲೀಸ್ ಸಿಬ್ಬಂದಿ ಅಡ್ಡಗಟ್ಟಿ ಗಾಂಜಾ ಕೇಸ್ ದಾಖಲಿಸುವುದಾಗಿ ಬೆದರಿಸಿ 2,500 ರೂ. ವಸೂಲಿ ಮಾಡಿರುವ ಆರೋಪವೊಂದು ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತ ಯುವಕ ವೈಭವ್ ಪಾಟೀಲ್ ಎಂಬವರು ಟ್ವಿಟ್ ಮಾಡಿ ದೂರಿದ್ದಾರೆ.
ರಾತ್ರಿ ಎಚ್ಎಸ್ಆರ್ ಲೇಔಟ್ 10ನೇ ಮುಖ್ಯ ರಸ್ತೆಯಲ್ಲಿ ತಾನು ರ್ಯಾಪಿಡೋ ಬುಕ್ ಮಾಡಿಕೊಂಡು ಹೋಗುತ್ತಿದೆ. ಅಲ್ಲಿಗೆ ಚೀತಾ ವಾಹನದಲ್ಲಿ ಬಂದ ಸಮವಸ್ತ್ರಧಾರಿ ಪೊಲೀಸರು, ತನ್ನನ್ನು ತಡೆದು ಬ್ಯಾಗ್ ಪರಿಶೀಲನೆ ನಡೆಸಿದರು. ಅದರಲ್ಲಿ ಗಾಂಜಾ ಪೊಟ್ಟಣ ಪತ್ತೆಯಾಯಿತು. ಆದರೆ, ಅದು ನನ್ನದಲ್ಲ ಎಂದು ಹೇಳಿದೆ. ಅದಕ್ಕೆ ಪೊಲೀಸರು, ಗಾಂಜಾ ಕೇಸ್ ಪತ್ತೆ ಮಾಡಿದರೇ 15 ಸಾವಿರ ರೂ. ಸಿಗುತ್ತದೆ ಎಂದು ಹೇಳಿದರು. ಬೈಕ್ ಕಳುಹಿಸಿ ನನ್ನನ್ನು ಅವರ ಬೈಕ್‌ನಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದರು.
ಆ ಬಳಿಕ ಮೆಡಿಕಲ್ ತಪಾಸಣೆ ಮಾಡಲಾಗುತ್ತದೆ ಎಂದು ಆಸ್ಪತ್ರೆ ಬಳಿಗೆ ಕರೆದೊಯ್ದದರು. ಆ ಬಳಿಕ ಬಲವಂತವಾಗಿ ನನ್ನ ಬಳಿಯಿಂದ 2,500 ರೂ. ಪಡೆದುಕೊಂಡರು. ಮತ್ತೆ ಎಟಿಎಂನಲ್ಲಿ ಡ್ರಾ ಮಾಡಿ ಹಣ ಕೊಡುವಂತೆ ಕೇಳಿದರು. ಎಟಿಎಂ ಕಾರ್ಡ್ ಇಲ್ಲ ಎಂದಾಗ ಅಲ್ಲೇ ಬಿಟ್ಟು ಹೋದರು. ನಾನು ಮತ್ತೆ ರ್ಯಾಪಿಡೋ ಬುಕ್ ಮಾಡಿಕೊಂಡು ಮನೆಗೆ ಬಂದೇ ಎಂದು ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾನೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ ಸಿ.ಎಚ್. ಪ್ರತಾಪ್ ರೆಡ್ಡಿ ತನಿಖೆಗೆ ಸೂಚನೆ ನೀಡಿದ್ದಾರೆ. ಇದರ ಮೇರೆಗೆ ಆಗ್ನೆಯ ವಿಭಾಗ ಡಿಸಿಪಿ ಸಿ.ಕೆ. ಬಾಬಾ, ತನಿಖೆ ಭರವಸೆ ನೀಡಿದ್ದಾರೆ. ಮತ್ತೊಂದೆಡೆ ಎಚ್ಎಸ್ಆರ್ ಲೇಔಟ್ ಪೊಲೀಸರು, ಯುವಕನನ್ನು ಪತ್ತೆ ಮಾಡಿ ಘಟನಾ ಸ್ಥಳ ಪರಿಶೀಲನೆ ನಡೆಸಿದಾಗ ಅದು ಬಂಡೇಪಾಳ್ಯ ಠಾಣೆಗೆ ವ್ಯಾಪ್ತಿಗೆ ಬರಲಿದೆ ಎಂದು ತಿಳಿದುಬಂದಿದೆ. ಇದೀಗ ರಾತ್ರಿ ಗಸ್ತುನಲ್ಲಿ ಇದ್ದವರು ಯಾರೆಂಬುದನ್ನು ತನಿಖೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.