ಪ್ರಾಥಮಿಕ ಶಿಕ್ಷಕರ ಆಯ್ಕೆ ಪಟ್ಟಿ ರದ್ದು ಪಡಿಸಿ ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೊರಡಿಸಿರುವ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ ನೀಡಿದೆ. ಈ ಮೂಲಕ ಶಿಕ್ಷಕರಾಗುವ ಕನಸನ್ನು ಕಂಡಿದ್ 13,363 ಮಂದಿ ಆಕಾಂಕ್ಷಿಗಳಿಗೆ ಭಾರಿ ಹಿನ್ನಡೆ ಉಂಟಾಗಿದೆ. ಜೊತೆಗೆ ಶಿಕ್ಷಣ ಇಲಾಖೆಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೂ ಹಿನ್ನಡೆಯಾಗಿದೆ.
ರಾಜ್ಯದಲ್ಲಿ ಶಿಕ್ಷಕರ ಇಲಾಖೆ ನೇಮಕಾತಿ ಕುರಿತಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯ ವಿರುದ್ಧ ನೂರಾರು ಅಭ್ಯರ್ಥಿಗಳು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಶಿಕ್ಷಕ ಅಭ್ಯರ್ಥಿಗಳ ಪತಿಯ ಜಾತಿ, ಆದಾಯ ಪ್ರಮಾಣಪತ್ರ ಪರಿಗಣನೆಗೆ ಪ್ರಶ್ನಿಸಲಾಗಿತ್ತು. ಆದರೆ, ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಪರಿಗಣಿಸಬೇಕು ಎಂದು ಮನವಿ ಮಾಡಲಾಗಿತ್ತು. ಈ ರಿಟ್ ಅರ್ಜಿಯನ್ನು ಪರಿಶೀಲಿಸಿ ವಿಚಾರಣೆ ಮಾಡಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ಇಂದು ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ.
ಇನ್ನು ಅಭ್ಯರ್ಥಿಗಳು ದಾಖಲಿಸಿದ್ದ ರಿಟ್ ಅರ್ಜಿಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿಯವರು ಶಿಕ್ಷಣ ಇಲಾಖೆಯ ನಿಯಮ ಕಾನೂನು ಬಾಹಿರವೆಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಇದೀಗ ಸರ್ಕಾರ ಬಿಡುಗಡೆ ಮಾಡಿರುವ ತಾತ್ಕಾಲಿಕ ಆಯ್ಕೆಪಟ್ಟಿಯೂ ಕಾನೂನು ಬಾಹಿರ ಎಂದು ವಾದ ಮಂಡಿಸಿದ್ದರು. ಈ ವಾದವನ್ನು ಆಲಿಸಿದ ಏಕಸದಸ್ಯ ಪೀಠವು ಶಿಕ್ಷಣ ಇಲಾಖೆಯ ಆಯ್ಕೆಪಟ್ಟಿ ರದ್ದುಪಡಿಸಿ ಆದೇಶ ನೀಡಿದೆ. ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ತಂದೆಯ ಜಾತಿ, ಆದಾಯ ಪ್ರಮಾಣಪತ್ರವನ್ನು ಉದ್ಯೋಗಕ್ಕೆ ಪರಿಗಣಿಸಲು ಸೂಚನೆಯನ್ನು ನೀಡಿದೆ. ಜೊತೆಗೆ, ಹೊಸದಾಗಿ ಆಯ್ಕೆ ಪಟ್ಟಿ ಪ್ರಕಟಿಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ನ್ಯಾ.ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದ್ದು, ರಿಟ್ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿದಂತಾಗಿದೆ.