-->
ಮಂಗಳೂರು: ಕಂಬಳ ಕರೆಯಲ್ಲಿ ಬಿದ್ದರೂ, ಕೋಣದೊಂದಿಗೆ ಗುರಿಮುಟ್ಟಿ ಸ್ವರ್ಣ ಪದಕ ಗೆದ್ದ ಜಾಕಿ

ಮಂಗಳೂರು: ಕಂಬಳ ಕರೆಯಲ್ಲಿ ಬಿದ್ದರೂ, ಕೋಣದೊಂದಿಗೆ ಗುರಿಮುಟ್ಟಿ ಸ್ವರ್ಣ ಪದಕ ಗೆದ್ದ ಜಾಕಿ



ಮಂಗಳೂರು: ಮುಲ್ಕಿ ಸೀಮೆ ಅರಸು ಜೋಡುಕರೆ ಕಂಬಳದ ಫೈನಲ್ ಭಾನುವಾರ ನಡೆದಿತ್ತು. ಈ ವೇಳೆ ನಂದಳಿಕೆ ಕೋಣಗಳನ್ನು ಓಡಿಸಿರುವ ಕಂಬಳ ಓಟಗಾರ ಬಂಬ್ರಾಣಬೈಲು ವಂದಿತ್ ಶೆಟ್ಟಿ ಅರ್ಧ ಕರೆಯಲ್ಲೇ ಜಾರಿ ಬಿದ್ದರೂ, ಕೋಣಗಳೊಂದಿಗೇ ಗುರಿ ಮುಟ್ಟಿ ಸ್ವರ್ಣ ಪದಕ ಬಾಚುವಲ್ಲಿ ಯಶಸ್ವಿಯಾಗಿದ್ದಾರೆ.




ಭಾನುವಾರ ಸಂಜೆ 6ಗಂಟೆ ಸುಮಾರಿಗೆ ಹಗ್ಗ ಹಿರಿಯ ವಿಭಾಗದ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್‌ 'ಬಿ' ಮತ್ತು ಪದವು ಕಾನಡ್ಕ ಪ್ಲೇವಿ ಡಿಸೋಜರ ಕೋಣಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು. ಘೋಷಣೆಯಾಗುತ್ತಿದ್ದಂತೆ ಎರಡೂ ಜತೆ ಕೋಣಗಳು ಓಟ ಪ್ರಾರಂಭಿಸಿದೆ. ಮೂಡಾಯಿ ಕರೆಯಲ್ಲಿ ಪದವು ಕಾನಡ್ಕ ಪ್ಲೇವಿ ಡಿಸೋಜರ(ಮುನ್ನೆ-ಗಂತು) ಕೋಣ ಗಳು ಹಾಗೂ ಪಡ್ಡಾಯಿ ಕರೆಯಲ್ಲಿ ನಂದಳಿಕೆ ಶ್ರೀಕಾಂತ್ ಭಟ್‌ರ (ಕುಟ್ಟಿ-ರಾಜ) ಕೋಣಗಳು ಓಡುತ್ತಿತ್ತು. ಆದರೆ ಅರ್ಧ ಕರೆ ದಾಟುತ್ತಿದ್ದಂತೆ ನಂದಳಿಕೆ ಕೋಣಗಳನ್ನು ಓಡಿಸುತ್ತಿದ್ದ ವಂದಿತ್‌ ಶೆಟ್ಟಿ ಕಾಲು ಜಾರಿ ಕರೆಯಲ್ಲೇ ಬಿದ್ದಿದ್ದಾರೆ.

ಆದರೆ ವಂದಿತ್ ಶೆಟ್ಟಿಯವರು ಬಿದ್ದರೂ ಸುಮಾರು 80 ಮೀ. ದೂರವನ್ನು ಹಗ್ಗ ಹಿಡಿದುಕೊಂಡೇ ಕೋಣದೊಂದಿಗೆ ಬಂದು (11.50ಸೆಕೆಂಡ್) ಗುರಿತಲುಪಿದ್ದಾರೆ. ಈ ಮೂಲಕ ಕೋಣದ ಮಾಲೀಕರಿಗೆ ಸ್ವರ್ಣ ಗೆದ್ದುಕೊಡುವಲ್ಲಿ ಯಶಸ್ವಿಯಾದರು. ಅರ್ಧದಲ್ಲೇ ಜಾರಿ ಬಿದ್ದರೂ ಗುರಿ ತಲುಪಿದ ವಂದಿತ್ ಶೆಟ್ಟಿ ಅವರ ಬಗ್ಗೆ ಕಂಬಳಾಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಯಿತು. ಪದವು ಕಾನಡ್ಕ ಪ್ಲೇವಿ ಡಿಸೋಜ ಕೋಣವನ್ನು ಬೈಂದೂರು ವಿವೇಕ್ ಓಡಿಸಿದ್ದರು.

ವಂದಿತ್ ಶೆಟ್ಟಿಯವರು ಕೋಣದೊಂದೊಗೆ ಓಡುವ ಶೈಲಿಯನ್ನು ಗಮನಿಸಿರುವ ಶ್ರೀಕಾಂತ್ ಭಟ್ ಅವರು ತಾನೇ ಆಸಕ್ತಿವಹಿಸಿ ವಂದಿತ್‌ ಶೆಟ್ಟಿಗೆ ತರಬೇತಿ ಕೊಡಿಸಿದ್ದರು. ಕಳೆದ 2 ವರ್ಷಗಳಿಂದ ಕೋಣ ಓಡಿಸುತ್ತಿರುವ ವಂದಿತ್ ಶೆಟ್ಟಿ ಈಗಾಗಲೇ ಹಲವು ಪದಕಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 

Ads on article

Advertise in articles 1

advertising articles 2

Advertise under the article